ಇಸ್ಮಾಮಿ ಮಾನಸಿಕತೆ ವಿರುದ್ಧ ಹೋರಾಟ

h27-sulibeli 1
Published on

ಹುಬ್ಬಳ್ಳಿ: ನಾವು ಮುಸ್ಲಿಮರ ವಿರೋಧಿ ಅಲ್ಲ, ಇಸ್ಲಾಂ ಧರ್ಮದ ವಿರುದ್ಧವೂ ಇಲ್ಲ. ಆದರೆ, ಇಸ್ಲಾಮಿ ಮಾನಸಿಕತೆಯ ವಿರುದ್ಧ ಹೋರಾಟ ಮಾಡಲಿದ್ದೇವೆ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲಿ ಎಚ್ಚರಿಕೆ ನೀಡಿದರು.
ಸದ್ಭಾವ ವೇದಿಕೆ ವತಿಯಿಂದ ನೇಹಾ ಹಿರೇಮಠ ಹತ್ಯೆ ಖಂಡಿಸಿ ನಗರದ ಮೂರುಸಾವಿರ ಮಠ ವಿದ್ಯಾವರ್ಧಕ ಸಂಘದ ಸುಧಾ ಶೆಟ್ಟಿ ಬಾಲಕಿಯರ ಪ್ರೌಢ ಶಾಲೆ ಮೈದಾನದಲ್ಲಿ ಶನಿವಾರ ಏರ್ಪಡಿಸಿದ್ದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ನೇಹಾ ಹತ್ಯೆಯಿಂದಾಗಿ ಇಡೀ ದೇಶ ಭಯಭೀತವಾಗಿದೆ. ಇದೊಂದು ವ್ಯವಸ್ಥಿತವಾದ ಸಂಚು. ದೇಶದಲ್ಲಿ ದಿನ ಬೆಳಗಾದರೆ ಲವ್ ಜಿಹಾದ್‌ನಂತಹ ಪ್ರಕರಣಗಳು ಸಾಕಷ್ಟು ಆಗುತ್ತಿವೆ.ಪ್ರೀತಿ ಹೆಸರಿನಲ್ಲಿ ಮೋಸ ಮಾಡುವ ಉದ್ದೇಶವಿದೆ ಎಂಬುದನ್ನು ಯುವತಿಯರು ಅರಿಯಬೇಕು. 2014ರಿಂದ 2017ರವರೆಗೆ 21 ಸಾವಿರ ಯುವತಿಯರು ರಾಜ್ಯದಿಂದ ನಾಪತ್ತೆಯಾಗಿದ್ದಾರೆ ಎಂದು ಗೃಹ ಸಚಿವರೇ ಹೇಳಿಕೆ ಕೊಟ್ಟಿದ್ದಾರೆ ಎಂದು ವಿವರಿಸಿದರು.
ಪ್ರೇಮದ ಸಂಕೇತ ಇರುವುದು ಶ್ರೀರಾಮನಲ್ಲಿ ಮಾತ್ರ. ತನ್ನ ಪತ್ನಿಗಾಗಿ ಯುದ್ಧ ಸಾರಿದವನು ಶ್ರೀರಾಮ. ಲವ್‌ಜಿಹಾದ್ ಮನಸ್ಥಿತಿ ಇರುವವರು ಕೊಲೆ, ಮೋಸ ಮಾಡುತ್ತಾರೆಯೇ ಹೊರತು ಪ್ರೀತಿ ತೋರುವುದಿಲ್ಲ. ಪ್ರೀತಿಸುವವರನ್ನೆ ಕೊಲೆ ಮಾಡಿದವರು ದ್ವೇಷಿಸುವವರನ್ನು ಯಾವ ರೀತಿ ಬರ್ಭರವಾಗಿ ಕೊಲೆ ಮಾಡಬಹುದು ಎಂಬುದನ್ನು ಊಹಿಸಿಕೊಳ್ಳಬೇಕು. ಹಿಂದುಗಳೆಲ್ಲರೂ ಒಟ್ಟಾಗಬೇಕು. ಹಿಂದು ಧರ್ಮ ಮಹಿಳೆಯರಿಗೆ ಸ್ವಾತಂತ್ರ್ಯ ನೀಡಲು ಹಿಂದೇಟು ಹಾಕುತ್ತಿಲ್ಲ. ಆ ಸ್ವಾತಂತ್ರ್ಯವನ್ನು ಕೆಲವರು ದುರ್ಬಳಕೆ ಮಾಡಿಕೊಳ್ಳಲು ಹೊಂಚು ಹಾಕುತ್ತಾರೆ. ಇದನ್ನು ನಾವೆಲ್ಲರೂ ಅರಿತುಕೊಳ್ಳಬೇಕು ಎಂದು ಹೇಳಿದರು.
ನಮ್ಮ ಹೆಣ್ಣು ಮಕ್ಕಳು ಪರಿಚಯವಾದ ನಾಲ್ಕು ದಿನಗಳಲ್ಲೇ ದೇಹ ಅರ್ಪಿಸುತ್ತಾರೆ. ಆದರೆ, ಲವ್‌ಜಿಹಾದ್ ಮನಸ್ಥಿತಿ ಉಳ್ಳವರು ದೇಹದ ಭಾವಚಿತ್ರಗಳನ್ನು ಸೆರೆ ಹಿಡಿದು ಬ್ಲ್ಯಾಕ್‌ಮೇಲ್ ಮಾಡುವ ಕುತಂತ್ರ ಮಾಡುತ್ತಿದ್ದಾರೆ. ಹಣ ಹಾಗೂ ಚಿನ್ನಾಭರಣಕ್ಕೆ ಬೇಡಿಕೆ ಇಡುತ್ತಾರೆ. ಲವ್ ಜಿಹಾದ್ ವಿರೋಧಿಸಿ ಹೋರಾಟ ಮಾಡುವವರನ್ನೇ ರೌಡಿ ಎಂದು ಹೇಳುವವರೂ ಇದ್ದಾರೆ. ಈ ಪ್ರಕರಣವನ್ನು ನಾವು ಲವ್‌ಜಿಹಾದ್ ಎಂದು ಹೇಳಲೇಬೇಕು ಹಾಗೂ ಒಪ್ಪಿಕೊಳ್ಳಲೆಬೇಕು. ಎಲ್ಲ ಮಠಾಧೀಶರು ಹಿಂದು ಸಮಾಜ ಒಂದು ಎಂದು ಹೇಳುವ ಮೂಲಕ ಲವ್‌ಜಿಹಾದ್ ಮೂಲ ಬೇರು ಕಿತ್ತೆಸೆಯಬೇಕು ಎಂದು ವಿನಂತಿಸಿದರು.
ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಶಿವಾನಿ ಶೆಟ್ಟಿ ಮಾತನಾಡಿ, ದೇಶದ ಪ್ರಗತಿಯನ್ನು ನಾವು ಮಹಿಳೆಯರಿಗೆ ಕೊಡುವ ಗೌರವದ ಆಧಾರದ ಮೇಲೆ ಅಳೆಯಬೇಕು. ಪಾಲಕರು, ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಕಾಲೇಜ್‌ಗಳಿಗೆ ಕಳಿಸುತ್ತಾರೆ. ಆದರೆ, ಕಾಲೇಜ್ ಆವರಣ, ಶಿಕ್ಷಣ ವ್ಯವಸ್ಥೆ ಹೇಗಿದೆ? ಎಂಬುದನ್ನು ನಾವು ಕಾಣಬೇಕು. ಅವುಗಳು ಭಾರತೀಯ ಸಂಸ್ಕೃತಿ ಬಿಂಬಿಸುವಂತಿರಬೇಕು ಎಂಬುದನ್ನು ಅರಿತು ಸೇರಿಸಬೇಕು ಎಂದರು.
ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಭಾಗ್ಯಶ್ರೀ ಬೆಳ್ಳಿ ಮಾತನಾಡಿ, ನೇಹಾ ಹಿರೇಮಠ ಹತ್ಯೆ ಪ್ರಕರಣ ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದೆ. ಲವ್‌ಜಿಹಾದ್ ಘಟನೆ ನಡೆದಿದ್ದರೂ ಮುಖ್ಯಮಂತ್ರಿಗಳು ಈ ಘಟನೆ ವೈಯಕ್ತಿಕ ಎಂದುಬಿಟ್ಟರು. ಇಂಥ ಹೇಳಿಕೆ ನೀಡಿರುವ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ಗೆ ಮಾತ್ರ ಸಿಎಂ ಅಲ್ಲ ಇಡೀ ರಾಜ್ಯಕ್ಕೆ ಸಿಎಂ ಎಂಬುದನ್ನು ಅರಿಯಬೇಕಿತ್ತು ಎಂದರು.
ಫಯಾಜ್ ಎನ್ನುವ ವ್ಯಕ್ತಿತ್ವ ನಮಗೆ ಬೇಡ. ಡಾ. ಎಪಿಜಿ ಅಬ್ದುಲ್ ಕಲಾಂ ಅಂಥವರ ವ್ಯಕ್ತಿತ್ವ ಬೇಕು. ಫಯಾಜ್‌ಗೆ ಗಲ್ಲು ಶಿಕ್ಷೆ ನೀಡಬೇಕು. ನೇಹಾಗೆ ನ್ಯಾಯ ದೊರೆಯುವವರೆಗೂ ನಾವು ಹೋರಾಟ ಮಾಡುತ್ತೇವೆ. ಮಹಿಳೆಯರಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸದ್ಭಾವ ವೇದಿಕೆ ಸಂಯೋಜಕ ಮಹಾದೇವ ಕರಮರಿ, ಸಹ ಸಂಯೋಜಕ ಶಂಕರಣ್ಣ ಮುನವಳ್ಳಿ, ಗಾಯಕ ರಮೇಶ ಕುರುಬಗಟ್ಟಿ, ಇತರರು ಇದ್ದರು. ಕಾರ್ಯಕ್ರಮ ಸಂಯೋಜಕ ಸುಭಾಷಸಿಂಗ್ ಜಮಾದಾರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net