

ಹೊಸ ಸಾಫ್ಟ್ವೇರ್ ರೂಪುಗೊಂಡಿದ್ದರೂ ಅದಕ್ಕೆ ಪೂರಕವಾಗಿ ಕೆಲಸ ಮಾಡಲು ಬೇಕಾದ ಮೂಲ ಸೌಕರ್ಯವೇ ಇಲ್ಲ. ಇದರಿಂದಾಗಿ ನೋಂದಣಿಗೆ ಅಡ್ಡಿಯಾಗುತ್ತಿದ್ದು, ಅಧಿಕಾರಿಗಳು ಮತ್ತು ಜನರ ನಡುವೆ ಕಿತ್ತಾಟ ನಡೆಯುತ್ತಿದೆ. ಈ ಹಿಂದೆ ಇದ್ದ ಕಾವೇರಿ ವೆಬ್ಸೈಟ್ ಅನ್ನು ತಿರುಚಿದ ಮತ್ತು ತೆರಿಗೆ ವಂಚನೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ 2 ತಿಂಗಳ ಹಿಂದಷ್ಟೇ ಕಾವೇರಿ ತಂತ್ರಾಂಶ 6.8 ಅನ್ನು ಮೇಲ್ದರ್ಜೆಗೇರಿಸಲಾಗಿದೆ. ಆದರೆ ಇದರ ಬಳಕೆ ಬಗ್ಗೆ ಸಿಬ್ಬಂದಿಗೆ ಸರಿಯಾದ ತರಬೇತಿಯೇ ಸಿಕ್ಕಿಲ್ಲ.
ಮೊಬೈಲ್ ನಂಬರ್ ಅನಗತ್ಯ: ಆಸ್ತಿ ನೋಂದಣಿ ವೇಳೆ ಆಧಾರ್, ಮೊಬೈಲ್ ನಂಬರ್ ಕಡ್ಡಾಯ ಮಾಡಲಾಗಿದೆ. ಆಧಾರ್ನಲ್ಲಿ ಮೊಬೈಲ್ ನಂಬರ್, ಬೆರಳಚ್ಚು, ವಿಳಾಸ, ಫೋಟೋ ಮತ್ತು ಕಣ್ಣಿನ ರೆಟಿನಾ ಮಾಹಿತಿ ಇರುತ್ತದೆ. ಇದನ್ನು ಬಿಟ್ಟು ಪ್ರತ್ಯೇಕವಾಗಿ ಮೊಬೈಲ್ ನಂಬರ್ ನಮೂದಿಸಿ ಅದಕ್ಕೆ ಬರುವ ಒಟಿಪಿ ಪಡೆದು ನೋಂದಣಿ ಮಾಡುವುದು ಅನಗತ್ಯ. ಆಧಾರ್ನಲ್ಲಿರುವ ಮೊಬೈಲ್ಗೆ ಒಟಿಪಿ ಹೋದರಷ್ಟೇ ಅಕ್ರಮ ತಡೆಯಲು ಸಾಧ್ಯ ಎಂಬ ಎಂಬ ಅಭಿಪ್ರಾಯ ಕೇಳಿಬಂದಿದೆ.
ಹಳೇ ಕಂಪ್ಯೂಟರ್
ಕಾವೇರಿ ತಂತ್ರಾಂಶ ನಿರ್ವಹಿಸಲು ದೆಹಲಿ ಮೂಲದ ಎಚ್ಸಿಎಲ್ ಇನ್ಪೋಸಿಸ್ಟಮ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. 2015ರಲ್ಲಿ ಅಳವಡಿಸಿದ್ದ ಕಂಪ್ಯೂಟರ್ ಇಂದಿಗೂ ಇದ್ದು, ಅವು ಬಹುತೇಕ ರಿಪೇರಿಗೆ ಬಂದಿವೆ. ಕೆಲವು ಚೆನ್ನಾಗಿದ್ದರೂ ಸಾಫ್ಟ್ವೇರ್ ಅಪ್ಡೇಟ್ ಆಗದ ಕಾರಣ ಅವುಗಳಲ್ಲಿ ಕೆಲಸ ನಿರ್ವಹಿಸಲು ಕಷ್ಟಸಾಧ್ಯವಾಗಿದೆ ಎಂದು ಸಬ್ ರಿಜಿಸ್ಟ್ರಾರ್ ಕಚೇರಿ ಸಿಬ್ಬಂದಿ ಹೇಳಿದ್ದಾರೆ.
ಕಾಗದ, ಟೋನರ್ ಇಲ್ಲ
ಸರ್ವರ್ಗೆ ಅಪ್ಲೋಡ್ ಮಾಡಲು ಜನರಿಂದ ಪ್ರತಿ ಪುಟಕ್ಕೆ 35 ರೂ. ಶುಲ್ಕ ವಿಧಿಸಲಾಗುತ್ತದೆ. ಒಂದು ಸಬ್ ರಿಜಿಸ್ಟ್ರಾರ್ ಕಚೇರಿಯಿಂದ ಅಂದಾಜು 10 ಲಕ್ಷ ರೂ. ಸರ್ಕಾರಕ್ಕೆ ಆದಾಯ ಬರುತ್ತಿದೆ. ಜನರಿಗೆ ಗುಣಮಟ್ಟದ ಸರ್ಟಿಫೈಡ್ ಕಾಫಿ ಕೊಡಲು ಕಾಗದ, ಪ್ರಿಂಟರ್, ಟೋನರ್ಗಳೇ ಇಲ್ಲದಂತಾಗಿದೆ.
ತರಬೇತಿ ಕೊರತೆ
ರಾಜ್ಯದಲ್ಲಿ 970 ಡೇಟಾ ಇಂಟ್ರಿ ಅಪರೇಟರ್ಗಳು, 12 ಆಡಳಿತಾತ್ಮಕ ಸಹಾಯಕ ಅಧಿಕಾರಿಗಳು, 71 ಹಾರ್ಡ್ವೇರ್ ನಿರ್ವಹಿಸುವ ಇಂಜಿನಿಯರ್ಗಳು ಇದ್ದಾರೆ. ಪ್ರಧಾನ ಕಚೇರಿಯಿಂದಲೇ ಡೇಟಾ ಅಪ್ಡೇಟ್ ಮಾಡುತ್ತಾರೆ. ಈ ಬಗ್ಗೆ ರಿಜಿಸ್ಟ್ರಾರ್ ಕಚೇರಿ ಸಿಬ್ಬಂದಿಗೆ ಮಾಹಿತಿ ಅಥವಾ ತರಬೇತಿ ಇಲ್ಲ.
ತಾಂತ್ರಿಕ ಸವಾಲು
ಈ ಹೊಸ ತಂತ್ರಾಂಶಕ್ಕೆ ತಾಂತ್ರಿಕ ಸವಾಲು ಕಾಡುತ್ತಿದೆ. ನೋಂದಣಿಗೆ ವ್ಯಕ್ತಿಗಳ ಹೆಬ್ಬೆಟ್ಟು ಮತ್ತು ಫೋಟೋ ತೆಗೆದು ಕರಾರು ಪತ್ರದ ಹಿಂಬದಿ ಮುದ್ರಿಸಿ ಸರ್ವರ್ನಲ್ಲಿ ಸಂಗ್ರಹಿಸಲಾಗುತ್ತದೆ. ಇದಕ್ಕಾಗಿ 25 ಸಿಡಿಗಳು ಬೇಕು. ಆದರೆ ಎಚ್ಸಿಎಲ್ ಕೇವಲ 4 ಸಿಡಿ ನೀಡುತ್ತಿದೆ. ಹೀಗಾಗಿ ಅಧಿಕಾರಿಗಳು ಕಡಿಮೆ ಬೆಲೆ ಸಿಡಿಯಲ್ಲಿ ದತ್ತಾಂಶ ಸಂಗ್ರಹಿಸಿ ಇಡುತ್ತಿದ್ದಾರೆ. ಸರ್ಟಿಫೈಡ್ ಕಾಫಿ ವಿತರಿಸಿದಾಗ ಹೆಬ್ಬೆಟ್ಟಿನ ಗೆರೆ ಮತ್ತು ಫೋಟೋಗಳು ಸರಿಯಾಗಿ ಕಾಣುವುದೇ ಇಲ್ಲ. ಸಿಡಿಗಳ ಸಂಗ್ರಹಕ್ಕೂ ವ್ಯವಸ್ಥೆ ಮಾಡಿಲ್ಲ.
ಸಬ್ ರಿಜಿಸ್ಟ್ರಾರ್ಗಳ ಕಡೆಗಣನೆ
ಉಪ ನೋಂದಣಿ ಕಚೇರಿಗೆ ಬೇಕಾದ ಕಂಪ್ಯೂಟರ್, ವಿದ್ಯುತ್, ಇಂಟರ್ನೆಟ್, ಜನರೇಟರ್, ಯುಪಿಎಸ್, ಕಾಗದ, ಟೋನರ್, ಪ್ರಿಂಟರ್ ಮತ್ತು ಸಿಬ್ಬಂದಿ ಪೂರೈಸುವ ಗುತ್ತಿಗೆ ಕಂಪನಿಗಳ ಕಾರ್ಯವೈಖರಿಯನ್ನು ಆಯಾ ಸಬ್ ರಿಜಿಸ್ಟ್ರಾರ್ ವರದಿ ಮೇಲೆ ನಿರ್ಧರಿಸಲಾಗುತ್ತಿತ್ತು. ಇದರಿಂದ ಗುಣಮಟ್ಟದ ಕೆಲಸ ಸಹ ಸಿಗುತ್ತಿತ್ತು. ಇದೀಗ ಪ್ರಧಾನ ಕಚೇರಿ ಅಧಿಕಾರಿಗಳೇ ಉಸ್ತುವಾರಿ ನೋಡಿಕೊಳ್ಳುತ್ತಿರುವ ಕಾರಣ ಗುತ್ತಿಗೆ ಕಂಪನಿಗಳು ಸಹ ಸಬ್ ರಿಜಿಸ್ಟ್ರಾರ್ ಕಚೇರಿ ಕಡೆ ಮುಖ ಮಾಡುತ್ತಿಲ್ಲ ಎಂಬ ಆರೋಪ ಕೇಳಿಬಂದಿವೆ.
ಪ್ರಾಯೋಗಿಕ ಯೋಜನೆ ಜಾರಿ
ರಾಜ್ಯದ ಮಹಾನಗರಗಳಲ್ಲಿ ನೀಡುತ್ತಿರುವ ಇ-ಖಾತಾ ಸೇವೆಯನ್ನು ಪಟ್ಟಣಗಳಿಗೂ ವಿಸ್ತರಿಸುವ ಸಲುವಾಗಿ ಹೊಸದಾಗಿ ‘ಇ-ಆಸ್ತಿ’ ತಂತ್ರಾಂಶ ರೂಪಿಸಿ ರಾಮನಗರ ಜಿಲ್ಲೆ ಮಾಗಡಿ, ಕನಕಪುರದಲ್ಲಿ ಪ್ರಯೋಗಿಕವಾಗಿ ಜಾರಿಗೆ ತರಲಾಗಿದೆ. ಕಂಪ್ಯೂಟರ್, ಸರ್ವರ್ ಸಮಸ್ಯೆಯಿಂದಾಗಿ ನೋಂದಣಿ ಪ್ರಕ್ರಿಯೆ ತಡವಾದ ಕಾರಣ ರಾಮನಗರದಲ್ಲಿ ಜನರು ಪ್ರತಿಭಟನೆ ನಡೆಸಿದ್ದಾರೆ.
ಆದಾಯ ಖೋತಾ
ರಾಜ್ಯದ ಉಪನೋಂದಣಿ ಕಚೇರಿಗಳಿಗೆ 2019-20ನೇ ಸಾಲಿನಲ್ಲಿ ನೀಡಲಾಗಿದ್ದ ತೆರಿಗೆ ಸಂಗ್ರಹದ ಗುರಿ ತಲುಪಲು ಸಾಧ್ಯವಾಗಿಲ್ಲ. 2019ರ ಏಪ್ರಿಲ್ನಿಂದ ಅಕ್ಟೋಬರ್ವರೆಗೆ 5,397 ಕೋಟಿ ರೂ. ತೆರಿಗೆ ಸಂಗ್ರಹ ಆಗಬೇಕಿತ್ತು. ಆದರೆ, 4,473 ಕೋಟಿ ರೂ. ಸಂಗ್ರಹವಾಗಿದ್ದು, 923 ಕೋಟಿ ರೂ. ಬಾಕಿ ಉಳಿದಿದೆ. 146 ಉಪನೋಂದಣಿ ಕಚೇರಿಗಳು ಕಡಿಮೆ ತೆರಿಗೆ ಸಂಗ್ರಹಿಸಿವೆ.
ನೋಂದಣಿ ಸಮಯ ವಿಸ್ತರಣೆ
ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಸರ್ವರ್ ಸಮಸ್ಯೆ ಉಂಟಾಗಿರುವ ಹಿನ್ನೆಲೆಯಲ್ಲಿ ನೋಂದಣಿ ಸಮಯವನ್ನೇ ವಿಸ್ತರಿಸಲಾಗಿದೆ. ತಕ್ಷಣ ಜಾರಿಗೆ ಬರುವಂತೆ ಉಪನೋಂದಣಿ ಕಚೇರಿಗಳಲ್ಲಿ ನಡೆಯುವ ನೋಂದಣಿ ಸಮಯವನ್ನು ಈಗಿದ್ದ 10.30-ಸಂಜೆ 5.30ರ ಬದಲಾಗಿ ಬೆಳಗ್ಗೆ 9ರಿಂದ ಸಂಜೆ 6.30ರವರೆಗೆ ವಿಸ್ತರಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ವರ್ಷಾಂತ್ಯದಲ್ಲಿ ಉಪನೋಂದಣಿ ಕಚೇರಿಗಳಿಗೆ ಆಸ್ತಿ ನೋಂದಣಿಗಾಗಿ ಹೆಚ್ಚು ಜನರು ಆಗಮಿಸುವ ಹಿನ್ನೆಲೆಯಲ್ಲಿ ಸಮಯ ವಿಸ್ತರಿಸಲಾಗಿದೆ. ಈ ಮೊದಲು ಒಂದು ಕರಾರು ಪತ್ರ ನೋಂದಣಿಗೆ 5-10 ನಿಮಿಷ ಸಾಕಾಗಿತ್ತು. ಆಧಾರ್, ಮೊಬೈಲ್ ಒಟಿಪಿ ಕಡ್ಡಾಯವಾದ ಮೇಲೆ 45 ನಿಮಿಷದಿಂದ 1 ಗಂಟೆ ಬೇಕಾಗಿದೆ. | ಉಪ ನೋಂದಣಾಧಿಕಾರಿ