

ವಿಜಯಪುರ: ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಿರುವ ಕ್ರಮ ಖಂಡಿಸಿ ಅವರ ಅಪಾರ ಬೆಂಬಲಿಗರು ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಸಿದ್ಧೇಶ್ವರ ದೇವಸ್ಥಾನದ ಎದುರು ಜಮಾಯಿಸಿದ ಸಾವಿರಾರು ಬೆಂಬಲಿಗರು ಕೇಸರು ಶಾಲು, ಬಾವುಟ ಹಿಡಿದು ರಾರಾಜಿಸಿದರು. ಶಾಸಕ ಯತ್ನಾಳ ಪರ ಘೋಷಣೆ ಮೊಳಗಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ಆಕ್ರೋಶ ಹೊರಹಾಕಿದರು. ಬಳಿಕ ಬೃಹತ್ ಮೆರವಣಿಗೆ ಮೂಲಕ ಮಹಾತ್ಮ ಗಾಂಧಿ ವೃತ್ತಕ್ಕೆ ಆಗಮಿಸಿ ಬಹಿರಂಗ ಸಮಾವೇಶ ನಡೆಸಿದರು.
ರಸ್ತೆ ತಡೆದು, ಟೈಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ಚುರುಕುಗೊಳಿಸಿದರು. ಅಗ್ನಿಶಾಮಕ ವಾಹನ ಬಂದು ಬೆಂಕಿ ನಂದಿಸಿತು. ರಸ್ತೆ ತಡೆಯಿಂದಾಗಿ ಕೆಲ ಕಾಲ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ಬಳಿಕ ತೆರೆದ ವಾಹನದಲ್ಲಿ ಮುಖಂಡರುಗಳು ಭಾಷಣ ಮಾಡಿ ಶಾಸಕ ಯತ್ನಾಳರನ್ನು ಮರಳಿ ಬಿಜೆಪಿಗೆ ಸೇರ್ಪಡೆಗೊಳಿಸುವಂತೆ ಒತ್ತಾಯಿಸಿದರು. ಹಾಗೊಂದು ವೇಳೆ ಬಿಜೆಪಿಗೆ ಮರಳಿ ಸೇರ್ಪಡೆಗೊಳಿಸದೇ ಇದ್ದಲ್ಲಿ ಬಿಜೆಪಿ ಬಹುದೊಡ್ಡ ಹಾನಿ ಅನುಭವಿಸಲಿದೆ ಎಂದು ಎಚ್ಚರಿಕೆ ಸಂದೇಶ ರವಾನಿಸಿದರು.
ಸ್ವಾಮಿ ವಿವೇಕಾನಂದ ಸೇನೆ ಅಧ್ಯಕ್ಷ ರಾಘವ ಅಣ್ಣಿಗೇರಿ ಮಾತನಾಡಿ, ಬಸನಗೌಡರ ಆಸ್ತಿಯೇ ಹಿಂದುತ್ವ. ಅವರ ಶಕ್ತಿಯೇ ಸಮಸ್ತ ಹಿಂದುಗಳು. ಪಕ್ಷ ಏನಾದರಾಗಲಿ ಕುಟುಂಬದ ಹಿತವೇ ಮುಖ್ಯ ಎನ್ನುವ ಅಪ್ಪ ಮಕ್ಕಳ ಕುತಂತ್ರ, ಕುಮ್ಮಕ್ಕಿನಿಂದ ಕೇವಲ ಬಸನಗೌಡ ಪಾಟೀಲ ಯತ್ನಾಳರನ್ನು ಹೊರಗೆ ಹಾಕಿಲ್ಲ. ಬದಲಾಗಿ ಇಡೀ ಹಿಂದುತ್ವವನ್ನೇ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಖರ ಹಿಂದುತ್ವ ನಾಯಕರನ್ನು ಗುರಿಯನ್ನಾಗಿಸಿ ಒಬ್ಬೊಬ್ಬರನ್ನು ಮುಗಿಸುತ್ತಿರುವ ಕುಟುಂಬವನ್ನು ನಂಬಿ ತೆಗೆದುಕೊಂಡಿರುವ ತಪ್ಪು ನಿರ್ಣಯವನ್ನು ಮತ್ತೊಮ್ಮೆ ಪರಿಶೀಲಿಸಿದರೆ ಒಳ್ಳೆಯದು. ಇಲ್ಲದಿದ್ದರೆ ಸಮಸ್ತ ನಾಡಿನ ಹಿಂದುಗಳೇ ತಕ್ಕ ಪಾಠ ಕಲಿಸುತ್ತಾರೆ ಎಚ್ಚರ ಇರಲಿ. ಹಿಂದುತ್ವದ ನಾಯಕ ಯಾರು ಅಂತ ಕೇಳಿದರೆ ಮೊದಲಿಗೆ ಬರುವ ಹೆಸರೇ ಬಸನಗೌಡ ಪಾಟೀಲ ಯತ್ನಾಳರದ್ದು. ರಾಜ್ಯದಲ್ಲಿ ಎಲ್ಲೇ ಹಿಂದು ಕಾರ್ಯಕರ್ತರ ಕೊಲೆಯಾದರೆ, ಅವರ ಮೇಲೆ ದೌರ್ಜನ್ಯ ನಡೆದರೆ ಮೊದಲು ಅವರನ್ನು ಭೇಟಿ ಆಗಿ ಸಾಂತ್ವನದ ಜೊತೆಗೆ ಪರಿಹಾರ ನೀಡುವರು ಬಸನಗೌಡರು. ರೈತರ ಆಸ್ತಿಗಳನ್ನು ಕಬಳಿಸುವ ಹುನ್ನಾರ ತಡೆಯಲು ಮೊದಲು ಪ್ರಧಾನಮಂತ್ರಿಗಳಿಗೆ ಪತ್ರ ಬರೆದವರೇ ಬಸನಗೌಡರು. ಗಟ್ಟಿಯಾಗಿ ನಿಂತು ದಿಟ್ಟತನದಿಂದ ಹೋರಾಟ ಮಾಡಿ ಕಬಳಿಸಲು ಯತ್ನಿಸಿರುವ ಆಸ್ತಿ ಮರಳಿ ಜನರಿಗೆ ಸಿಗುವಂತೆ ಮಾಡಿದ ನಾಯಕರು ನಮ್ಮ ಬಸನಗೌಡರು. ಫಕೀರ ಬಸ್ತಿ ಆಗಿದ್ದ ವಿಜಯಪುರ ಹಿಂದುತ್ವ, ಶಾಂತಿಯ ಬೀಡು ಮಾಡಿದ್ದಾರೆ ಎಂದರು.
ಮುಖಂಡ ದಯಾಸಾಗರ ಪಾಟೀಲ ಮಾತನಾಡಿ, ಬಿಜೆಪಿ ನಮ್ಮ ನಾಯಕರನ್ನು ಉಚ್ಚಾಟಿಸಿದ್ದು ದುರಾದೃಷ್ಟಕರ. ಅವರ ಶಕ್ತಿ ಏನೆಂಬುದನ್ನು ಹೈಕಮಾಂಡ್ ಮನಗಾಣಬೇಕು. ಅದನ್ನು ನಾವೆಲ್ಲರೂ ತೋರಿಸಬೇಕು. ಹಿಂದು ಸರ್ಕಾರ ತರುವ ಆಶಯ ನಮ್ಮದು. ಯಾವುದೋ ಒಂದು ಕುಟುಂಬದ ಸ್ವಾರ್ಥಕ್ಕಾಗಿ ಪಕ್ಷ ಬಲಿ ಕೊಡುವುದು ಒಳ್ಳೆಯದಲ್ಲ ಎಂದರು.
ಮುಖಂಡರಾದ ಎಂ.ಎಸ್. ರುದ್ರಗೌಡರು, ಬಿ.ಎಸ್. ಪಾಟೀಲ ನಾಗರಾಳ ಹುಲಿ, ಗುರು ಗಚ್ಚಿನಮಠ ಸೇರಿದಂತೆ ಅನೇಕರಿದ್ದರು.