ಕುಲಾಂತರ ತಳಿ ವಿರೋಧಿಸಿ ರೈತರ ಪ್ರತಿಭಟನೆ

mysore
Published on

ಮೈಸೂರು: ಕುಲಾಂತರಿ ಬೆಳೆ ಮತ್ತು ಕುಲಾಂತರಿ ಆಹಾರ ವಿರೋಧಿಸಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಯಿತು.


ಕುಲಾಂತರಿ ಬೆಳೆ ಮತ್ತು ಕುಲಾಂತರಿ ಆಹಾರ ತಿರಸ್ಕರಿಸಬೇಕು. ಅದಕ್ಕಾಗಿ ನೀತಿ ರೂಪಿಸುವ ಅಗತ್ಯವಿಲ್ಲ. ಇದೇ ವೇಳೆ ರಾಜ್ಯವನ್ನು ಸಹ ಕುಲಾಂತರಿಮುಕ್ತ ಕರ್ನಾಟಕವೆಂದು ಘೋಷಿಸಬೇಕೆಂದು ಆಗ್ರಹಿಸಿದರು.


ಸುಪ್ರೀಂಕೋರ್ಟ್ ಸಾರ್ವಜನಿಕ ಸಮಾಲೋಚನೆ ಮೂಲಕ ಕುಲಾಂತರಿ ಬೆಳೆಗಳ ಕುರಿತಾಗಿ ರಾಷ್ಟ್ರೀಯ ನೀತಿ ರೂಪಿಸಲು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಆದೇಶಿಸಿದೆ. ಹೀಗಾಗಿ ಒಂದು ವೇಳೆ ನೀತಿ ರೂಪಿಸುವುದಿದ್ದಲ್ಲಿ ರೈತರ ಅಹವಾಲು ಆಲಿಸಬೇಕು. ಬೃಹತ್ ಕಂಪನಿಗಳು ತಮ್ಮ ಲಾಭದ ಉದ್ದೇಶದಿಂದ ನಮ್ಮ ಸ್ಥಳೀಯ ಕೃಷಿ, ಸಮುದಾಯಗಳು ಮತ್ತು ದೇಶದ ಸಾರ್ವಭೌಮತ್ವಕ್ಕೆ ಹಾನಿಯುಂಟು ಮಾಡುವ ಕುಲಾಂತರಿ ಬೆಳೆಗಳನ್ನು ಮಾರುಕಟ್ಟೆಗೆ ತರುವ ಹುನ್ನಾರ ಮಾಡುತ್ತಿವೆ ಎಂದು ಪ್ರತಿಭಟನಾಕಾರರು ದೂರಿದರು.


ಬಿತ್ತನೆ ಬೀಜಗಳ ಮೇಲೆ ಬೆರಳಣಿಕೆಯಷ್ಟು ಕಂಪನಿಗಳು ಒಡೆತನ ಸಾಧಿಸಲಿವೆ. ಇದರ ಅರ್ಥ ದೇಶ ಮತ್ತೆ ಹೊಸ ರೀತಿಯ ವಸಾಹತುಶಾಹಿ ವ್ಯವಸ್ಥೆಯೊಳಗೆ ಸಿಕ್ಕಿಕೊಳ್ಳಲಿದೆ. ಹೀಗಾಗಿ ನಮ್ಮ ಬೆಳೆ ಪದ್ಧತಿ, ತಿನ್ನುವ ಆಹಾರ ಮತ್ತು ಪೌಷ್ಟಿಕತೆ ಮೇಲೆ ನಾವು ನಿಯಂತ್ರಣ ಕಳೆದುಕೊಳ್ಳಬೇಕಾಗುತ್ತದೆ ಎಂದು ಆತಂಕವ್ಯಕ್ತಪಡಿಸಿದರು.


ಕುಲಾಂತರಿ ಬೆಳೆಗಳ ಕುರಿತು ರಾಷ್ಟ್ರೀಯ ನೀತಿ ರಚನೆಗೆ ಕುರಿತು ರೈತರ, ಜನರ ಅನೇಕ ಸಮಸ್ಯೆಗಳನ್ನು ಸಮಾಲೋಚನಾ ಸಭೆಯಲ್ಲಿ ಮಂಡಿಸಬೇಕು ಎಂದೂ ಆಗ್ರಹಿಸಿದರು.


ಜಿಲ್ಲಾಧಿಕಾರಿ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಿದರು. ಸಂಘಟನೆಯ ಮುಖಂಡರಾದ ಟಿ.ಆರ್.ವಿದ್ಯಾಸಾಗರ್, ಎಸ್.ರಘು, ಎಚ್.ಆರ್.ಬಂಗಾರಸ್ವಾಮಿ, ಕೆ.ಜಿ.ಶಿವಪ್ರಸಾದ್, ಸತೀಶ್, ಮಂಜು ಕಿರಣ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net