ಸದೃಢ ರಾಷ್ಟ್ರೀಯತೆ ವರ್ತಮಾನದ ಅಗತ್ಯ

GKN HOSABALE
Published on

ಗೋಕರ್ಣ: ಭಾರತ ದೇಶ ತನ್ನ ಸನಾತನ ಪೂರ್ವ ವೈಭವವನ್ನು ಸದೃಢವಾದ ರಾಷ್ಟ್ರೀಯತೆಯಿಂದ ಮಾತ್ರ ಮರಳಿ ಪಡೆಯಲು ಸಾಧ್ಯವಾಗಿದೆ. ಕಾರಣ ದೇಶಾಭಿಮಾನದ ರಾಷ್ಟ್ರೀಯತೆಯೊಂದೇ ವರ್ತಮಾನದ ಅಗತ್ಯವಾಗಿದೆ. ಇಂದೂರಿನ ವೀರರಾಣಿ ಅಹಿಲ್ಯಾಬಾಯಿ ಹೋಳ್ಕರ್ ಅವರು ರಾಷ್ಟ್ರೀಯತೆಗೆ ಸಾರ್ವಕಾಲಿಕ ಮಾದರಿಯಾಗಿದ್ದಾರೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಷ್ಟ್ರೀಯ ಸಹ-ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದರು.

ಅಹಿಲ್ಯಾಬಾಯಿಯವರ 300ನೇ ಜಯಂತಿ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ಬೌದ್ಧಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಣ್ಣ ವಯಸ್ಸಿನಲ್ಲಿ ತಮ್ಮ ಪತಿ, ಆ ತರುವಾಯ ಮಗನನ್ನು ಕಳೆದುಕೊಂಡರೂ ಎದೆಗುಂದದೇ ದೇಶದ ಸ್ವಾತಂತ್ರ್ಯ್ಕಾಗಿ ದಿಟ್ಟ ಹೋರಾಟ ನಡೆಸಿದ ಅಹಿಲ್ಯಾಬಾಯಿ ಅವರು ಕಲಿಸಿದ ರಾಷ್ಟ್ರೀಯತೆ ಪಾಠವನ್ನು ದೇಶವಾಸಿಗಳು ಶಾಶ್ವತವಾಗಿ ಅನುಸರಿಸುವಂತಾಗಬೇಕು. ಸ್ವಾತಂತ್ರ್ಯ ಹೋರಾಟದ ಜೊತೆಗೆ ಗೋಕರ್ಣ ಸೇರಿ ದೇಶದ ಮೂಲೆ ಮೂಲೆಗಳಲ್ಲಿ ನೂರಾರು ಮಂದಿರಗಳನ್ನು ಮತ್ತು ತೀರ್ಥಕ್ಷೇತ್ರಗಳಲ್ಲಿ ಉಚಿತವಾಗಿ ವಾಸಿಸಲು ಅನುಕೂಲವಾಗಬಲ್ಲ ಧರ್ಮಛತ್ರಗಳನ್ನು ನಿರ್ವಿುಸಿ ಕೊಟ್ಟು ಧರ್ಮ ಸಂರಕ್ಷಣೆಗೆ ಕಾರಣರಾದವರು ಎಂದರು.

ಸ್ಥಳೀಯ ಆರ್​ಎಸ್​ಎಸ್ ಘಟಕದ ವತಿಯಿಂದ ಶ್ರೀಹರಿಹರೇಶ್ವರ ವೇದಪಾಠ ಶಾಲಾ ಪ್ರಮುಖ ವೇ.ಉದಯ ಮಯ್ಯರ್, ವೇ.ಪಶುಪತಿ ಅಡಿ, ಮಹೇಶ ಹಿರೇಗಂಗೆ, ವೇ.ಶ್ರೀನಿವಾಸ ಅಡಿ ಅವರು ಹೊಸಬಾಳೆ ಅವರನ್ನು ಸನ್ಮಾನಿಸಿದರು.

ಸ್ಥಳೀಯ ಆರ್​ಎಸ್​ಎಸ್ ಘಟಕದ ಗಣಪತಿ ಮಾಣೇಶ್ವರ ಅಡಿ ನಿರ್ವಹಿಸಿದರು. ಆರ್​ಎಸ್​ಎಸ್ ಉತ್ತರ ಪ್ರಾಂತ ಪ್ರಮುಖ ನರೇಂದ್ರಜಿ ಮತ್ತು ವಿವಿಧ ಕಡೆಗಳ ಸಂಘ ಪ್ರಮುಖರಿದ್ದರು.

ಮಂದಿರಗಳಲ್ಲಿ ಪೂಜೆ: ದತ್ತಾತ್ರೇಯ ಹೊಸಬಾಳೆ ಅವರು ಶ್ರೀ ಮಹಾಗಣಪತಿಗೆ ಪೂಜೆ ಸಲ್ಲಿಸಿ, ಬಳಿಕ ಶ್ರೀ ಮಹಾಬಲೇಶ್ವರ ಮಂದಿರದಲ್ಲಿ ಆತ್ಮಲಿಂಗಕ್ಕೆ ಪಂಚಾಮೃತ ಮತ್ತು ನವಧಾನ್ಯ ಸಹಿತವಾದ ರುದ್ರಾಭಿಷೇಕ ಸಲ್ಲಿಸಿದರು. ಪೂಜೆಯ ತರುವಾಯ ಶ್ರೀಮಹಾಬಲೇಶ್ವರ ನಾಗಾಭರಣಕ್ಕೆ ಮಹಾಮಂಗಳಾರತಿ ಮತ್ತು ಪ್ರಾರ್ಥನೆ ಸಮರ್ಪಿಸಿದರು. ಮಂದಿರದ ಪ್ರಧಾನ ಅರ್ಚಕರಾದ ವೇ. ಗಣಪತಿ ಗಜಾನನ ಭಟ್ಟ ಹಿರೇ, ವೇ. ಶ್ರೀನಿವಾಸ ಅಡಿ ಮತ್ತು ಅರ್ಚಕ ಉಪಾಧಿವಂತರು ಪೂಜೆ ನಿರ್ವಹಿಸಿದರು. ಮಂದಿರ ಸಮಿತಿಯ ವೇ. ಸುಬ್ರಹ್ಮಣ್ಯ ಅಡಿ, ಮಹೇಶ ಹಿರೇಗಂಗೆ, ಕ್ಷೇತ್ರ ಪುರೋಹಿತ ವೇ.ಶಂಕರ ಗಣೇಶ ಜೋಶಿ, ವೇ.ಪಶುಪತಿ ಅಡಿ, ವೇ.ಗಣೇಶ ಜೋಗಳೇಕರ, ವೇ.ಶಿವರಾಮ ವಿನಾಯಕ ಅಡಿ, ಬಿಜೆಪಿಯ ಕುಮಾರ ಮಾರ್ಕಾಂಡೆ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net