

ವಿಜಯಪುರ: ಮುಡಾ ಪ್ರಕರಣದಲ್ಲಿ ಅನವಶ್ಯಕವಾಗಿ ಸಿಎಂ ಸಿದ್ದರಾಮಯ್ಯ ಅವರ ತೇಜೋವಧೆ ನಡೆಸುತ್ತಿರುವ ಮತ್ತು ಬಿಜೆಪಿ-ಜೆಡಿಎಸ್ ಪಕ್ಷಗಳ ಕೈಗೊಂಬೆಯಂತೆ ವರ್ತಿಸುತ್ತಿರುವ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋತ್ ಅವರನ್ನು ಕೂಡಲೇ ವಾಪಸ್ ಕರೆಯಿಸಿಕೊಳ್ಳಲು ಆಗ್ರಹಿಸಿ ಗುರುವಾರ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಾ. ಡಿ.ಜಿ. ಸಾಗರ ಬಣ)ಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದ ಪದಾಧಿಕಾರಿಗಳು ಬಳಿಕ ಮಹಾತ್ಮ ಬಸವೇಶ್ವರ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಜಿಲ್ಲಾಡಳಿತ ಕಚೇರಿವರೆಗೆ ಮೆರವಣಿಗೆ ನಡೆಸಿದರು. ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಸಂಚಾಲಕ ಸಿದ್ದು ರಾಯಣ್ಣವರ ಮಾತನಾಡಿ, ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ನಡೆದಿದೆ. ಬಿಜೆಪಿ-ಜೆಡಿಎಸ್‌ನ ಈ ಹುನ್ನಾರಕ್ಕೆ ರಾಜ್ಯಪಾಲರನ್ನು ಬಳಸಿಕೊಳ್ಳಲಾಗುತ್ತಿದೆ. ರಾಜ್ಯಪಾಲರು ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದರು.
ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವದ ಮೂಲಭೂತ ತತ್ವಕ್ಕೆ ಅಪಾಯವಾಗುತ್ತದೆ. ಒಕ್ಕೂಟದ ವ್ಯವಸ್ಥೆಗೆ ಧಕ್ಕೆ ಬರುತ್ತದೆ. ರಾಜ್ಯಪಾಲರು ಸಾಂವಿಧಾನಿಕ ಪ್ರತಿನಿಧಿಯಾಗಿ ಕೆಲಸ ಮಾಡುವ ಬದಲು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ನಡೆದುಕೊಂಡಿದ್ದಾರೆ. ಜೊತೆಗೆ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಜಾಪ್ರಭುತ್ವ ನಡೆಗೆ ಬೆಂಬಲ ನೀಡಿದ್ದಾರೆ. ಜೊತೆಗೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ-17-ಎ ಅಡಿ ಅನುಮತಿ ನೀಡುವ ವೇಳೆ ಪಾಲಿಸಬೇಕಾಗಿರುವ ನಿಯಮಗಳನ್ನು (ಎಸ್‌ಒಪಿ) ಉಲ್ಲಂಘಿಸಲಾಗಿದೆ. 2021 ನೇ ಸೆ.3 ರಂದು ಕೇಂದ್ರ ಸರ್ಕಾರ ಈ ಬಗ್ಗೆ ಸ್ಪಷ್ಟ ಮಾರ್ಗಸೂಚಿ ಹೊರಡಿಸಲಾಗಿದೆ. ಇದನ್ನು ಪರಿಗಣಿಸಿಲ್ಲ. ರಾಜ್ಯಪಾಲರು ದೇಶದ ರಾಷ್ಟ್ರಪತಿಗಳು ಪ್ರತಿನಿಧಿಯಾಗಿದ್ದು, ಸಂವಿಧಾನದ ಪ್ರತಿನಿಧಿಗಳಾಗಿ ಕೆಲಸ ಮಾಡಬೇಕು. ಅದನ್ನು ಬಿಟ್ಟು ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಪ್ರತಿನಿಧಿಗಳಾಗಿ ಕೆಲಸ ಮಾಡುತ್ತಿರುವುದು ಅಕ್ಷಮ್ಯ. ರಾಜ್ಯಪಾಲರ ಈ ನಡುವಳಿಕೆಯನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದರು.
ಡಿಎಸ್‌ಎಫ್ ಜಿಲ್ಲಾ ಸಂಚಾಲಕ ವೈ.ಸಿ. ಮಯೂರ ಮಾತನಾಡಿ, ರಾಷ್ಟ್ರಪಾಲರು ಕೂಡಲೇ ರಾಜ್ಯಪಾಲರನ್ನು ವಾಪಸ್ ಕರೆಯಿಸಿಕೊಳ್ಳಬೇಕೆಂದು ಆಗ್ರಹಿಸಿದರು.
ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡರಾದ ಫಯಾಜ್ ಕಲಾದಗಿ, ಸತೀಶ ಅಡವಿ, ರಮೇಶ ಧರಣಾಕರ, ಮಹಾಂತೇಶ ಸಾಸಬಾಳ, ವಿಜಯಕುಮಾರ ಕಾಂಬಳೆ, ರಮೇಶ ಚಲವಾದಿ, ರಮೇಶ ನಿಂಬಾಳಕರ, ದಶರಥ ಇಟಗಿ, ಅವಿನಾಶ ಬಾಣಿಕೋಲ, ರಮೇಶ ವೀರಕರ, ದೇವೇಂದ್ರ ಬಾವಿಮನಿ, ಜಾನು ಗುಡಿಮನಿ, ಅರುಣ ಗವಾರಿ ಮತ್ತಿತರರಿದ್ದರು.