

ಚಿಕ್ಕಮಗಳೂರು: ದತ್ತಪೀಠವನ್ನು ಹಿಂದುಗಳಿಗೆ ಒಪ್ಪಿಸಬೇಕು ಎಂದು ಪ್ರಬಲವಾಗಿ ಪ್ರತಿಪಾದನೆ ಮಾಡಲಾಗಿದ್ದು, ಈ ಸಂಬಂಧ ಮುಖ್ಯಮಂತ್ರಿಗಳನ್ನು ಭೇಟಿ ಮಾಡುವ ಪ್ರಯತ್ನ ನಡೆದಿದೆ ಎಂದು ಬಜರಂಗದಳದ ಕರ್ನಾಟಕ ಪ್ರಾಂತ ಸಹ ಸಂಯೋಜಕ ರಘು ಸಕಲೇಶಪುರ ತಿಳಿಸಿದರು.
ನಗರದ ಕಾಮಧೇನು ಗಣಪತಿ ದೇವಾಲಯದಲ್ಲಿ ಶನಿವಾರ ದತ್ತಜಯಂತಿ ಪ್ರಯುಕ್ತ ನಡೆದ ಮಾಲಾಧಾರಣೆ ಕಾರ್ಯಕ್ರಮದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ನ್ಯಾ.ನಾಗಮೋಹನ್ ದಾಸ್ ವರದಿಯನ್ನು ತಿರಸ್ಕರಿಸಿ ಹೊಸ ಸಮಿತಿ ನೇಮಕ ಮಾಡಬೇಕು. ಈ ಬಾರಿ ಹಿಂದು ಅರ್ಚಕರನ್ನು ನೇಮಕ ಮಾಡಲೇಬೇಕು. ಇಲ್ಲದಿದ್ದಲ್ಲಿ ಉಗ್ರವಾದ ಹೋರಾಟ ನಡೆಸುವುದಾಗಿ ಹೇಳಿದರು.
ಸಮಾಜ ಜಾಗೃತಿ ಪ್ರಯತ್ನ:
ಚಂದ್ರದ್ರೋಣ ಪರ್ವತ ಶ್ರೇಣಿಯ ದತ್ತಪೀಠದಲ್ಲಿ ಡಿ.27 ರಿಂದ 29 ರವರೆಗೆ ದತ್ತಜಯಂತಿಯನ್ನು ಬಜರಂಗದಳ ಹಾಗೂ ವಿಹಿಂಪ ಹಮ್ಮಿಕೊಳ್ಳುತ್ತಿದೆ. ಅದರ ಪೂರ್ವಭಾವಿಯಾಗಿ ಇಡೀ ಸಮಾಜ ಹಾಗೂ ಯುವಕರನ್ನು ಜಾಗೃತಿಗೊಳಿಸುವ ಸಲುವಾಗಿ ಶ್ರದ್ಧೆಯಿಂದ 11 ದಿನಗಳ ಕಾಲ ವ್ರತಾಚರಣೆ ಕೈಗೊಳ್ಳಲು ಮಾಲಾಧಾರಣೆ ಮಾಡಲಾಗಿದೆ. ರಾಜ್ಯಾದ್ಯಂತ ಪ್ರತಿ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ದತ್ತಭಕ್ತರು ಮಾಲಾಧಾರಣೆ ಮಾಡಿದ್ದಾರೆ.
ಡಿ.27 ರಂದು ಅನಸೂಯಾ ಮಾತಾ ಪೂಜೆ, 28 ರಂದು ಸಾಂಕೇತಿಕವಾಗಿ ಸಂಕೀರ್ತನಾ ಯಾತ್ರೆ, 29 ರಂದು ದತ್ತಪೀಠಕ್ಕೆ ಭಕ್ತರು ತೆರಳಿ ದತ್ತಪಾದುಕೆಗಳನ್ನು ದರ್ಶನ ಮಾಡಲಿದ್ದಾರೆ ಎಂದು ತಿಳಿಸಿದರು.