

ಹುನಗುಂದ: ನಾಗಾಲೋಟದ ಬದುಕಿಗೆ ಒಗ್ಗಿಕೊಂಡು ನಾಡಿನ ಉನ್ನತ ಕಲೆ, ಸಂಸ್ಕೃತಿ ಉಳಿಸಿ ಬೆಳೆಸಲು ಶ್ರಮಿಸಬೇಕೆಂದು ಪುರಸಭೆ ಅಧ್ಯಕ್ಷೆ ಭಾಗಶ್ರೀ ರೇವಡಿ ಹೇಳಿದರು.
ಪಟ್ಟಣದ ವಿದ್ಯಾನಗರ ಪುರಸಭೆ ಮಂಗಲ ಭವನದಲ್ಲಿ ನವರಾತ್ರಿ ಮಹೋತ್ಸವ ನಿಮಿತ್ತ ಹೊನ್ನಗುಂದ ಸಂಸ್ಕೃತಿ ಬಳಗದಿಂದ ಭಾನುವಾರ ಹಮ್ಮಿಕೊಂಡಿದ್ದ ನಾಟಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯ ರಂಗಕರ್ಮಿಗಳು ಸಮಾಜ ಸುಧಾರಣೆ, ಶಿಕ್ಷಣದ ಅವಶ್ಯಕತೆ, ಹೋರಾಟದ ಜೀವನ, ಯಶಸ್ಸಿನ ಸುಂದರ ಬದುಕು ಹೀಗೆ ಹಲವಾರು ಕ್ಷೇತ್ರಗಳು ನಾಟಕದ ತಿರುಳಿನಿಂದ ಮಾದರಿ ಜೀವನಕ್ಕೆ ಮಾರ್ಗದರ್ಶಗಳಾಗಿವೆ. ಶಿಕ್ಷಣದ ಜತೆಗೆ ನಾಟಕ, ಕಲೆ, ಸಂಸ್ಕೃತಿ, ಸಾಹಿತ್ಯ ಹಾಗೂ ಸಮಸ್ತ ಬದುಕಿನ ಯಶಸ್ಸಿನ ಆಯಾಮಗಳನ್ನು ಮಕ್ಕಳಿಗೆ ಬಾಲ್ಯದಲ್ಲೇ ಹೇಳಿಕೊಡಬೇಕೆಂದು ತಿಳಿಸಿದರು.
ನಟ ನಿರ್ದೇಶಕ ಮಹಾಂತೇಶ ಗಜೇಂದ್ರಗಡ ಮಾತನಾಡಿ, ಅಖಂಡ ವಿಜಯಪುರ ಜಿಲ್ಲೆಯ ಬಸವನಾಡಿನ ಬಿಳಿಜೋಳದ ನಾಡು ಹುನಗುಂದ ಕಲೆಯ ತವರೂರು. ತಾಲೂಕಿನ ಸೂಳೇಭಾವಿ ಮತ್ತು ಕಮತಗಿಯಲ್ಲಿ ಜಾತ್ರೆ ಹಬ್ಬ ಹರಿದಿನಗಳಲ್ಲಿ ನಾಟಕ ಪ್ರದರ್ಶನ ನಡೆಯುತ್ತಲೇ ಇವೆ. ಪಿ.ಬಿ. ಧುತ್ತರಗಿ, ಧ್ರುವರಾಜ ದೇಶಪಾಂಡೆ, ಟಿ.ಕೆ. ಮಹ್ಮದಾಲಿ ಸೇರಿ ಹಲವರು ಸಾಕಷ್ಟು ನಾಟಕಗಳನ್ನು ಬರೆದು ರಂಗ ಸಜ್ಜಿಕೆಯಲ್ಲಿ ಪಾತ್ರಧಾರಿಗಳಾಗಿ ನಾಟಕ ಕಲೆ ಜೀವಂತವಿರಿಸಿದ್ದಾರೆ. ಹೊನ್ನಗುಂದ ಸಂಸ್ಕೃತಿ ಬಳಗ ಮತ್ತು ಸ್ನೇಹರಂಗದ ಬಳಗದವರು ವರ್ಷದುದ್ದಕ್ಕೂ ರಂಗಕಲಾ ಪ್ರೇಮಿಗಳಿಗೆ ಕಲೆ ಉಣಬಡಿಸುತ್ತ ಬಂದಿದ್ದಾರೆ. ಶಾಲಾ ಕಾಲೇಜು ಮಟ್ಟದಲ್ಲಿ ಶಿಕ್ಷಣದೊಂದಿಗೆ ರಂಗಕಲೆ ಬಗ್ಗೆ ಆಸಕ್ತಿ ತೋರಬೇಕೆಂದರು.
ಹೊಸಬ ತಂಡದ ಸದಸ್ಯ ಸಂಚಾಲಕ ಶಿವಬಸವ ಅಂಗಡಿ ಅಧ್ಯಕ್ಷತೆ ವಹಿಸಿದ್ದರು.
ತಂಡದ ಹಿರಿಯ ಸದಸ್ಯ ಮಹಾಂತೇಶ ಅಗಸಿಮುಂದಿನ ಪ್ರಾಸ್ತಾವಿಕ ಮಾತನಾಡಿದರು. ಪುರಸಭೆ ಉಪಾಧ್ಯಕ್ಷೆ ರಾಜೇಶ್ವರಿ ಬದಾಮಿ, ಉದ್ಯಮಿ ಅಶೋಕ ಭಾವಿಕಟ್ಟಿ, ಶಿಕ್ಷಕ ರಾಯನಗೌಡ ಪಾಟೀಲ, ತಂಡದ ಕೇಶವ ಅವರಾದಿ, ವಾದಿರಾಜ ಗುಡ್ಡದ, ವೀರೇಶ ಕುರ್ತಕೋಟಿ ಉಪಸ್ಥಿತರಿದ್ದರು.
ಐ.ಎಚ್. ನಾಯಕ ನಿರೂಪಿಸಿದರು. ವಿಜಯಕುಮಾರ ಕುಲಕರ್ಣಿ ವಂದಿಸಿದರು. ನಂತರ ಕಾನೂರು ಸುಬ್ಬಮ್ಮ ಹೆಗ್ಗಡಿತಿ ಮತ್ತು ದಾಂಪತ್ಯ ಗೀತ ನಾಟಕ ಪ್ರದರ್ಶನಗೊಂಡಿತು.