

ನೆಲಮಂಗಲ: ರಾಜ್ಯ ಮತ್ತು ಕೇಂದ್ರ ಸರ್ಕಾರದೊಂದಿಗೆ ಪ್ರತಿಯೊಬ್ಬರೂ ಕೈಜೋಡಿಸಿ ಕರೊನಾಮುಕ್ತ ದೇಶವನ್ನಾಗಿಸಬೇಕು ಎಂದು ಸಂಸದೆ ಶೋಭಾಕರಂದ್ಲಾಜೆ ಕರೆ ನೀಡಿದರು.
ಪಟ್ಟಣದ ಬಸವಣ್ಣದೇವರ ಮಠದಲ್ಲಿ ಬಡಕೂಲಿಕಾರ್ಮಿಕರು, ನಿರಾಶ್ರಿತರಿಗಾಗಿ ಆಹಾರ ಪೊಟ್ಟಣ ತಯಾರು ಮಾಡುತ್ತಿದ್ದ ಸ್ಥಳಕ್ಕೆ ಗುರುವಾರ ಭೇಟಿ ನೀಡಿ, ಪರಿಶೀಲಿಸಿ ಮಾತನಾಡಿದರು. ಸೋಂಕು ತಡೆಯಲು ದೇಶವ್ಯಾಪಿ ಲಾಕ್‌ಡೌನ್ ಮಾಡಿದ್ದು, ಈ ಭಾಗದ ಉತ್ತರ ಭಾರತ ಮತ್ತು ಕರ್ನಾಟಕ ಭಾಗಗಳ ಜನತೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದನ್ನು ಮನಗಂಡು ನಿತ್ಯ ಆಹಾರ ಸಾಮಗ್ರಿ ಕಿಟ್ ವಿತರಣೆಗೆ ಮುಂದಾಗಿದ್ದು, ಬಸವಣ್ಣದೇವರ ಮಠದಲ್ಲಿ ಭಕ್ತರು, ದಾನಿಗಳ ಸಹಕಾರದಿಂದ ನಿತ್ಯವೂ 3 ಸಾವಿರಕ್ಕೂ ಹೆಚ್ಚು ಮಂದಿಗೆ ಊಟ ವ್ಯವಸ್ಥೆ ಮಾಡಿ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿರುವ ವಿಚಾರ ತಿಳಿದು ವೀಕ್ಷಿಸಲು ಆಗಮಿಸಿದ್ದು, 250 ಅಕ್ಕಿ, 50 ಕೆಜಿ ಬೇಳೆಯನ್ನು ನೀಡಿ ಸ್ವಾಮೀಜಿ ಮತ್ತು ಈ ಭಾಗದ ದಾನಿಗಳ ಮಹತ್ಕಾರ್ಯಕ್ಕೆ ಕೈಜೋಡಿಸುತ್ತಿರುವುದಾಗಿ ತಿಳಿಸಿದರು.
ಏ.14ಕ್ಕೆ ಸೋಂಕಿತರ ಸಂಖ್ಯೆ ಪೂರ್ಣವಾಗಿ ಕಡಿಮೆಯಾಗಿ ಲಾಕ್‌ಡೌನ್ ಕೊನೆಗೊಳ್ಳಲಿದೆ ಎಂಬ ವಿಶ್ವಾಸವಿತ್ತು. ದೆಹಲಿಯಲ್ಲಿನ ತಬ್ಲಿಗ್‌ನಲ್ಲಿ ಭಾಗವಹಿಸಿದ್ದವರಿಂದ ಸಹಸ್ರಾರು ಸಂಖ್ಯೆಯ ಜನರಿಗೆ ಸೋಂಕು ಹರಡಿದ್ದು ಭಯದ ವಾತಾವರಣ ನಿರ್ಮಾಣವಾಗಿದೆ. ಈಗಾಗಲೇ ಪ್ರಧಾನಮಂತ್ರಿ ಸರ್ವ ಪಕ್ಷಗಳ ಸಭೆ ನಡೆಸುವ ಜತೆಗೆ ಆರೋಗ್ಯ ಇಲಾಖೆ ಮಾಹಿತಿಯನ್ನಾಧರಿಸಿ ಲಾಕ್‌ಡೌನ್ ವಿಚಾರವಾಗಿ ತೀರ್ಮಾನ ತಗೆದುಕೊಳ್ಳಲಿದ್ದಾರೆ ಎಂದರು.
ವೈದ್ಯರು, ನರ್ಸ್‌ಗಳು, ಪೊಲೀಸರು ಸೇರಿ ಅನೇಕ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದು ಅವರ ಅವಿಸ್ಮರಣೀಯ ಸೇವೆಗೆ ಕೃತಜ್ಞತಾಪೂರ್ವಕ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.
ಸ್ವಯಂಸೇವಕರ ಜತೆ ಆಹಾರ ಪೊಟ್ಟಣ ತಯಾರಿ ಕಾರ್ಯದಲ್ಲಿ ಕೈಜೋಡಿಸಿದರು. ನಂತರ ತಾಲೂಕಿನ ಹೊನ್ನಗಂಗಯ್ಯನಪಾಳ್ಯದಲ್ಲಿನ ನಿರಾಶ್ರಿತರು, ಅಲೆಮಾರಿ ಸಮುದಾಯದ ಜನರಿಗೆ ಆಹಾರ ಸಾಮಗ್ರಿ ಕಿಟ್ ಜತೆಗೆ ಆಹಾರ ಪೊಟ್ಟಣ ವಿತರಿಸಿದರು.
ಭಕ್ತರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ದಾನಿಗಳ ಸಹಕಾರ ಪಡೆದು ಆಹಾರ ಪೂರೈಕೆ ಮಾಡಲು ಶ್ರಮಿಸಲಾಗುತ್ತಿದೆ. ಇದು ಧರ್ಮ, ಪಕ್ಷ ಹಾಗೂ ಜಾತ್ಯಾತೀತ ಕಾರ್ಯವಾಗಿದೆ. ಲಾಕ್‌ಡೌನ್ ಕೊನೆಗೊಳ್ಳುವವರೆಗೂ ಆಹಾರ ಪೂರೈಕೆ ಮಾಡಲಾಗುವುದು. ಆದರೆ ಕೆಲವರು ಸರ್ಕಾರದ ಅನುದಾನ ಬಳಕೆಮಾಡಿಕೊಂಡು ಆಹಾರ ಪೂರೈಸಲಾಗುತ್ತಿದೆ ಎಂದು ಗೊಂದಲ ಸೃಷ್ಟಿಸಿದ್ದಾರೆ. ಇದು ಸತ್ಯವಲ್ಲ ಎಂದು ಬಸವಣ್ಣ ದೇವರಮಠದ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಸ್ಪಷ್ಟನೆ ನೀಡಿದರು.
ಮಾಜಿ ಶಾಸಕ ಎಂ.ವಿ.ನಾಗರಾಜು, ನೆ.ಯೋ.ಪ್ರಾಧಿಕಾರದ ಅಧ್ಯಕ್ಷ ಎಸ್.ಮಲ್ಲಯ್ಯ, ತಹಸೀಲ್ದಾರ್ ಎಂ.ಶ್ರೀನಿವಾಸಯ್ಯ, ಬಿಇಒ ಕೆ.ಸಿ.ರಮೇಶ್, ರೋಟರಿ ಮಾಜಿ ಅಧ್ಯಕ್ಷ ಎಂ.ಎನ್.ಹರೀಶ್‌ಕುಮಾರ್, ನಿರ್ದೇಶಕ ಶಿವಶಂಕರ್, ವೀರಶೈವಮಹಾಸಭಾ ಅಧ್ಯಕ್ಷ ಎನ್.ಎಸ್.ಶಾಂತಕುಮಾರ್, ಖಜಾಂಚಿ ಸಿ.ಸತೀಶ್‌ಕುಮಾರ್, ಹೋಬಳಿ ಅಧ್ಯಕ್ಷ ಮುರುಳಸಿದ್ದಯ್ಯ, ಮುಖಂಡ ರಾಮಕೃಷ್ಣಪ್ಪ, ಎಚ್.ಜೆ.ಸತೀಶ್‌ಕುಮಾರ್, ಕೆ.ಪಿ.ಭೃಂಗೀಶ್, ಮುದ್ದುಮಾರೇಗೌಡ, ಗ್ರಾಪಂ ಸದಸ್ಯ ಎಚ್.ಡಿ.ಹರ್ಷ, ಸ್ವಯಂಸೇವಕರಾದ ಬಿ.ರುದ್ರಸ್ವಾಮಿ, ಎಸ್.ಎಂ.ಮಹದೇವ್, ಗಣೇಶ್, ಶೀಲಾಶಿವಶಂಕರ್, ಜ್ಞಾನೇಶ್, ಎಸ್.ಪುನೀತ್‌ರಾಜ್‌ಗಂಗಾಧರ್, ಬೈರವ, ಕಿರಣ್ ಮತ್ತಿತರರು ಇದ್ದರು.