ಜಿಲ್ಲೆಯನ್ನು ಮಲೆನಾಡಾಗಿಸಲು ಶ್ರಮಿಸಿ, ಸಂಸದ ಬಿ.ಎನ್. ಬಚ್ಚೇಗೌಡ ಸಲಹೆ, ಹೊಸಕೋಟೆಯಲ್ಲಿ ನೀರಿನ ಸಂಗ್ರಹಣ ತೊಟ್ಟಿಗೆ ಚಾಲನೆ

09-Manjunath-HSK-01
Published on

ಹೊಸಕೋಟೆ: ಬಯಲುಸೀಮೆ ಪ್ರದೇಶವಾದ ಬೆಂ. ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಈ ಭಾಗವನ್ನು ಮಲೆನಾಡನ್ನಾಗಿಸುವ ಪಣ ತೊಡಬೇಕು ಎಂದು ಸಂಸದ ಬಿ.ಎನ್. ಬಚ್ಚೇಗೌಡ ತಿಳಿಸಿದರು.

ನಗರದ ದೊಡ್ಡಅಮಾನಿ ಕೆರೆಯಂಗಳದಲ್ಲಿ ಸ್ಥಳೀಯ ನಾಯಕರ ಸ್ವಂತ ಹಣದಿಂದ ಸುಮಾರು 45 ಲಕ್ಷ ರೂ. ವೆಚ್ಚದಲ್ಲಿ ಚನ್ನಬೈರೇಗೌಡರ ಜನ್ಮಶತಮಾನೋತ್ಸವ ಪ್ರಯುಕ್ತ ಐದು ಲಕ್ಷ ಲೀಟರ್ ಸಾಮರ್ಥ್ಯದ ನೀರು ಸಂಗ್ರಹ ತೊಟ್ಟಿ ಉದ್ಘಾಟಿಸಿ ಮಾತನಾಡಿದರು.

ಹೊಸಕೋಟೆ ಭಾಗಕ್ಕೆ ಶಾಶ್ವತ ನೀರಾವರಿ ಯೋಜನೆ ರೂಪಿಸಲು ಸರ್ಕಾರದಮಟ್ಟದಲ್ಲಿ ಮಾತುಕತೆ ನೆಡೆಸಲಾಗಿದೆ. ದೊಡ್ಡಅಮಾನಿ ಕೆರೆಗೆ ಎಲೆಮಲ್ಲಪ್ಪ ಶಟ್ಟರ್ ಕೆರೆಯಿಂದ ನೀರು ಹಾಯಿಸುವ 7 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಜಾರಿ ಮಾಡಿದ್ದರಿಂದ ಇಂದು ಈ ನೀರು ಬರಲು ಸಾಧ್ಯವಾಯಿತು. ಆದರೂ ಜನಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನೀರಿನ ಅಗತ್ಯ ಇದೆ ಎಂದರು.

ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಪ್ರತಿ ನಾಲ್ಕೈದು ದಿನಗಳಿಗೊಮ್ಮೆ ನೀರು ಪೂರೈಸುವ ನಿಟ್ಟಿನಲ್ಲಿ ನೂತನವಾಗಿ 9 ಕೊಳವೆಬಾವಿಗಳನ್ನು ಕೆರೆಯಂಗಳದಲ್ಲಿ ಕೊರೆಸಿ ಶೇಖರಣೆಗೂ ಕ್ರಮ ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಕಡಿಮೆಯಾಗಲಿದೆ ಎಂದರು.

ತಾಲೂಕಿನಲ್ಲಿ ನೀರಿನ ಭವಣೆ ನೀಗಿಸಲು ಈಗಾಗಲೇ ನೂತನ ಯೋಜನೆ ರೂಪಿಸಲಾಗಿದ್ದು, ಸಮೇತನಹಳ್ಳಿ ಭಾಗದ ಕೆರೆಗಳಿಗೆ ವ್ಯಂಗಯ್ಯನ ಕೆರೆಯ ಸುಮಾರು 40 ಎಂಎಲ್‌ಡಿ ನೀರು ಹರಿಸಲು ಯೋಜನೆ ರೂಪಿಸಲಾಗಿದ್ದು, ಎಚ್‌ಎನ್ ವ್ಯಾಲಿಯ ನೀರನ್ನು ಸುಮಾರು 30 ಕೆರೆಗಳಿಗೆ ಪೈಪ್‌ಲೈನ್ ಮೂಲಕ ಹರಿಸಲು ಯೋಜನೆ ರೂಪಿಸಲಾಗಿದೆ ಎಂದರು.

ನಗರಸಭೆ ಸದಸ್ಯರಾದ ಕೇಶವ್ ಮೂರ್ತಿ, ಜಮುನಾ ಹರೀಶ್, ರೂಪಾ ಉಮೇಶ್, ಜಿಪಂ ಮಾಜಿ ಸದಸ್ಯ ಸಿ. ಮುನಿಯಪ್ಪ, ಭಾರತ ಸರ್ಕಾರದ ಕಾರ್ಮಿಕ ಭವಿಷ್ಯ ನಿಧಿ ಸದಸ್ಯ ವಿಜಯ್ ಕುಮಾರ್, ಟಿಎಪಿಸಿಎಂಎಸ್ ಉಪಾಧ್ಯಕ್ಷ ಗೋಪಾಲಗೌಡ, ಮುಖಂಡರಾದ ಬಿ.ವಿ. ಬೈರೇಗೌಡ, ಚಿತ್ರೇಗೌಡ, ಡಾ. ಎಚ್.ಎಂ. ಸುಬ್ಬರಾಜ್, ರಮಾ ಮಂಜುನಾಥ್, ಪಂಚಮುಖಿ ದೇವಾಲಯದ ಧರ್ಮದರ್ಶಿ ವಾಸುದೇವಯ್ಯ, ವಕೀಲ ಮಂಜುನಾಥ್ ಹಾಜರಿದ್ದರು.

ಮಾದಕ ದ್ರವ್ಯ ಜಾಲದ ಬಗ್ಗೆ ಮಾಧ್ಯಮಗಳಲ್ಲಿ ಚಿತ್ರನಟ-ನಟಿಯರ ಬಗ್ಗೆ ವರದಿಗಳು ಬರುತ್ತಿದೆ. ಆದರೆ ತಾಲೂಕಿನಲ್ಲಿ ಮಾದಕ ದ್ರವ್ಯ ಮಾರಾಟ ಹಾಗೂ ಬಳಕೆ ಜಾಲ ರಾಜಾರೋಷವಾಗಿ ನೆಡೆಯುತಿದ್ದು, ಇದಕ್ಕೆ ಕಠಿಣ ಹಾಕಲು ಹೊಸಕೋಟೆ ಉಪವಿಭಾಗದ ಡಿವೈಎಸ್‌ಪಿ ನಿಂಗಪ್ಪ ಬಸಪ್ಪ ಸಕ್ರಿ ಅವರೊಂದಿಗೆ ಮಾತನಾಡಿದ್ದೇನೆ. ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಈ ವಿಚಾರ ಮಾತನಾಡುತ್ತೇನೆ. ಶರತ್ ಬಚ್ಚೇಗೌಡ ಶಾಸಕ, ಹೊಸಕೋಟೆ ವಿಧಾನಸಭಾ ಕ್ಷೇತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net