ಮುಕ್ತ, ನ್ಯಾಯಸಮ್ಮತ ಚುನಾವಣೆ ನಡೆಸಲು ಶ್ರಮಿಸಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸೂಚನೆ

21
Published on

ಮೈಸೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಭಾಗಿಯಾಗುವ ಪ್ರತಿಯೊಬ್ಬ ಅಧಿಕಾರಿ ಹಾಗೂ ಸಿಬ್ಬಂದಿ ಮಾದರಿ ನೀತಿ ಸಂಹಿತೆ ಪಾಲನೆಯ ಬಗ್ಗೆ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.
ಜಿಲ್ಲಾ ಪಂಚಾಯಿತಿಯ ದೇವರಾಜು ಅರಸು ಸಭಾಂಗಣದಲ್ಲಿ ಶುಕ್ರವಾರ ಲೋಕಸಭಾ ಸಾರ್ವತ್ರಿಕ ಚುನಾವಣೆ -2024ರ ಕರ್ತವ್ಯದಲ್ಲಿ ನಿರತರಾಗುವ ವಿವಿಧ ಹಂತದ ಅಧಿಕಾರಿಗಳಿಗೆ ಕರ್ತವ್ಯ ಹಾಗೂ ಜವಾಬ್ದಾರಿಗಳ ಕುರಿತು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.
ಎಫ್‌ಎಸ್, ಎಸ್‌ಎಸ್‌ಟಿ, ವಿಎಸ್‌ಟಿ ತಂಡ ಹಾಗೂ ಪೊಲೀಸ್ ಸೆಕ್ಟರ್‌ಗಳಿಗೆ ನಿಯೋಜನೆಗೊಳ್ಳುವ ಅಧಿಕಾರಿಗಳು ಚುನಾವಣಾ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಚುನಾವಣಾ ಆಯೋಗದ ನಿರ್ದೇಶನಗಳನ್ನು ತಿಳಿದುಕೊಂಡು ಪಾಲಿಸಬೇಕು ಎಂದು ಸೂಚಿಸಿದರು.
ಮುಂಬರುವ ಲೋಕಸಭೆ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ನಿಗದಿಪಡಿಸಿರುವ ವೆಚ್ಚದಂತೆ ಅಭ್ಯರ್ಥಿಗಳು ಹಣ ವೆಚ್ಚ ಮಾಡುತ್ತಿರುವ ಬಗ್ಗೆ ತೀವ್ರ ನಿಗಾ ಇಡಬೇಕು. ಚುನಾವಣೆ ಕರ್ತವ್ಯವನ್ನು ನಿಷ್ಪಕ್ಷ ಹಾಗೂ ನ್ಯಾಯ ಸಮ್ಮತವಾಗಿ ನಡೆಸುವ ಹಿನ್ನೆಲೆಯಲ್ಲಿ ನಿಯೋಜನೆಗೊಂಡ ಎಲ್ಲ ತಂಡಗಳೂ ಹೆಚ್ಚು ಗಮನ ವಹಿಸಬೇಕು. ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ದಾಖಲಿಸಿ ಇಟ್ಟುಕೊಂಡು ಕಾಲಕಾಲಕ್ಕೆ ಈ ಕುರಿತು ವರದಿ ಕಳುಹಿಸಬೇಕು ಎಂದು ಹೇಳಿದರು.
ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾಗುತ್ತಿರುವಂತೆಯೇ ಎಂಸಿಸಿ ತಂಡಗಳು ಉಲ್ಲಂಘನೆ ಆಗದಂತೆ ಎಚ್ಚರ ವಹಿಸಬೇಕು. ಸಹಾಯಕ ವೆಚ್ಚ ವೀಕ್ಷಕರು, ಫ್ಲೈಯಿಂಗ್ ಸ್ಕ್ವಾಡ್‌ಗಳು, ವಿಡಿಯೋ ಸರ್ವಲೆನ್ಸ್, ವಿಡಿಯೋ ವೀವಿಂಗ್ ತಂಡಗಳು, ಸ್ಟ್ಯಾಟಿಕ್ ಸರ್ವಲೆನ್ಸ್ ತಂಡಗಳು ಇನ್ನೂ ಜಾಗೃತರಾಗಿ ಕಾರ್ಯನಿರ್ವಹಿಸಬೇಕು. ಒಟ್ಟಾರೆ ಮುಕ್ತ, ನ್ಯಾಯಸಮ್ಮತ ಚುನಾವಣೆ ನಡೆಸಲು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.
ಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿಯನ್ವಯ ತಮ್ಮ ತಮ್ಮ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕಿದೆ. ಸಹಾಯಕ ಚುನಾವಣಾಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವ ತಂಡಗಳ ಅಧಿಕಾರಿಗಳಿಗೆ ಸೂಕ್ತ ತರಬೇತಿ ಮತ್ತು ಮಾರ್ಗದರ್ಶನ ನೀಡಬೇಕು. ಈ ಹಿನ್ನೆಲೆಯಲ್ಲಿ ಅಭ್ಯರ್ಥಿ ಹಾಗೂ ರಾಜಕೀಯ ಪಕ್ಷಗಳಿಗೆ ನಿಗದಿಯಾಗುವ ಚುನಾವಣಾ ವೆಚ್ಚದ ಕುರಿತು ಸರಿಯಾದ ಲೆಕ್ಕಪತ್ರಗಳು ಇರಬೇಕು. ಈ ಸಂಬಂಧ ಯಾವುದೇ ಗೊಂದಲಕ್ಕೆ ಒಳಗಾಗದೇ ಎಲ್ಲ ದಾಖಲೆಗಳನ್ನು ಸರಿಯಾಗಿ ನಿರ್ವಹಿಸಬೇಕು ಎಂದು ಹೇಳಿದರು.
ಚುನಾವಣೆ ಘೋಷಣೆಯಾದ ತಕ್ಷಣ ಜಿಲ್ಲೆಯಲ್ಲಿ ರಾಜಕೀಯ ಪಕ್ಷಗಳ ಬ್ಯಾನರ್, ಫ್ಲೆಕ್ಸ್ ಹಾಗೂ ವಿವಿಧ ಇಲಾಖೆಗಳ ವೆಬ್‌ಸೈಟ್‌ಗಳನ್ನು ಪಟ್ಟಿ ಮಾಡಿಕೊಂಡು ವೆಬ್‌ಸೈಟ್‌ಗಳಲ್ಲಿರುವ ಸಚಿವರು ಹಾಗೂ ಜನಪ್ರತಿನಿಧಿಗಳ ಭಾವಚಿತ್ರ ತೆರವುಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಗುರುತಿಸಲಾಗಿರುವ ಮತಗಟ್ಟೆಗಳಲ್ಲಿ ಕುಡಿಯುವ ನೀರು, ಶೌಚಗೃಹ, ಅಂಗವಿಕಲರು, ಅಶಕ್ತರು ಪ್ರವೇಶಿಸಲು ಅನುಕೂಲವಾಗುವಂತೆ ರ‌್ಯಾಂಪ್ ವ್ಯವಸ್ಥೆ ಮಾಡಬೇಕು. ಈ ಹಿಂದೆ ಯಾವ ಮತಗಟ್ಟೆ ಕಟ್ಟಡಗಳಲ್ಲಿ ಸೌಲಭ್ಯ ಇದೆ? ಯಾವ ಕಟ್ಟಡಗಳಲ್ಲಿ ಇಲ್ಲ ಎಂಬ ಬಗ್ಗೆ ಪಟ್ಟಿ ಮಾಡಿ ಸೌಲಭ್ಯ ಇಲ್ಲದ ಕಡೆ ಸೌಲಭ್ಯ ಒದಗಿಸಲು ಮುಂದಾಗಬೇಕು ಎಂದು ಹೇಳಿದರು.
ಚೆಕ್‌ಪೋಸ್ಟ್ ಸ್ಥಾಪನೆ ಇನ್ನಿತರ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಈಗಲೇ ಕಾರ್ಯಪ್ರವೃತ್ತವಾಗಬೇಕು ಹಾಗೂ ಅಗತ್ಯ ಸಿದ್ಧತೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ ಮಾತನಾಡಿ, ಚುನಾವಣೆ ಕೆಲಸವನ್ನು ಹಗುರವಾಗಿ ಪರಿಗಣಿಸಬಾರದು. ಇಡೀ ತಂಡವಾಗಿ ಹೊಣೆಗಾರಿಕೆಯಿಂದ ಕೆಲಸ ನಿರ್ವಹಿಸಿದರೆ ಯಶಸ್ವಿಯಾಗಲು ಸಾಧ್ಯವಾಗಲಿದೆ. ಹಾಗಾಗಿ ಪ್ರತಿಯೊಬ್ಬರೂ ನಿಯೋಜಿಸಿದ ಕರ್ತವ್ಯವನ್ನು ಯಾವುದೇ ಲೋಪ ಇಲ್ಲದೆ ನಿರ್ವಹಿಸಬೇಕು ಎಂದು ತಿಳಿಸಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜಿ.ಟಿ.ದಿನೇಶ್‌ಕುಮಾರ್, ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆಯ ಆಯುಕ್ತ ದೇವರಾಜು, ಇತರ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net