

ವಿಜಯವಾಣಿ ಸುದ್ದಿಜಾಲ ತುಮಕೂರು
ಕಠಿಣ ಪರಿಶ್ರಮ, ಆಸಕ್ತಿಯಿಂದ ಮಾತ್ರ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗಲಿದೆ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಹೇಳಿದರು. ನಗರದ ಎಸ್ಐಟಿ ಕಾಲೇಜಿನ ಆವರಣದಲ್ಲಿ ಶನಿವಾರ ಸಿದ್ಧಗಂಗಾ ತ್ರಾಂತ್ರಿಕ ಮಹಾವಿದ್ಯಾಲಯದ 15ನೇ ಪದವಿ ಪ್ರದಾನ ಸಮಾರಂಭದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಇಂದಿನ ವಿದ್ಯಾರ್ಥಿಗಳು ದೇಶದ ಮುಂದಿನ ಭವಿಷ್ಯ. ಹಾಗಾಗಿ, ಪದವಿ ಪ್ರದಾನ ದಿನವು ವಿದ್ಯಾರ್ಥಿಗಳ ಜೀವನದ ಒಂದು ಪ್ರಮುಖ ಘಟ್ಟವಾಗಿದೆ. ಗುರಿ ಸಾಧನೆಗೆ ಇದು ಮೆಟ್ಟಿಲಾಗಲಿದೆ ಎಂದರು.
ಶ್ರೀಮಠದ ಸಂಸ್ಥೆಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಲ್ಲಿ ಸಹಜವಾಗಿ ಧೈರ್ಯ, ಶಕ್ತಿ ಇರಲಿದೆ. ಯಾವುದೇ ಕಷ್ಟಕರ ಸನ್ನಿವೇಶವನ್ನು ಎದುರಿಸುವ ಸಾಮರ್ಥ್ಯ ಅವರಲ್ಲಿರಲಿದೆ. ಎಸ್ಐಟಿ ಕಾಲೇಜು ಕೇವಲ ವಿದ್ಯಾಭ್ಯಾಸ, ಭಾಷಣ, ತರಗತಿ ಪಾಠಕ್ಕೆ ಸೀಮಿತವಾಗದೆ ನಿಮ್ಮನ್ನು ಉತ್ತಮ ಪ್ರಜೆಯಾಗಿ ರೂಪಿಸುತ್ತಿದೆ. ದೇಶ ಹಾಗೂ ಪ್ರಪಂಚಕ್ಕೆ ವಿದ್ಯಾರ್ಥಿಗಳ ಕೊಡುಗೆ ಅತ್ಯಗತ್ಯ. ಪದವೀಧರರಾಗಿ ಹೊರ ಹೋಗುತ್ತಿರುವ ನೀವುಗಳು ಭವ್ಯ ಭಾರತ ನಿರ್ಮಾಣಕ್ಕೆ ನಿಮ್ಮ ಸೇವೆ ಮುಡಿಪಾಗಿಡಬೇಕು ಎಂದು ಶ್ರೀಗಳು ಕರೆಯಿತ್ತರು.
ಸದೃಢ ದೇಶ ನಿರ್ಮಿಸುವಲ್ಲಿ ಯುವ ಸಮುದಾಯದ ಪಾತ್ರ ಮಹತ್ವದ್ದಾಗಿದೆ. ಉತ್ತಮ ಪ್ರೋತ್ಸಾಹ ನೀಡಿದರೆ ಕ್ರೀಡೆ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿಯು ಉನ್ನತ ಸಾಧನೆ ಮಾಡಬಹುದು. ಗುಣಮಟ್ಟದ ಬೋಧನೆ ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತವಾಗಿದ್ದು, ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಉತ್ತಮ ಕಾರ್ಯ ಮಾಡುತ್ತಿದೆ. ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ವಿಜ್ಞಾನ, ತಂತ್ರಜ್ಞಾನದ ಮೂಲಕ ಹೊಸ ಆವಿಷ್ಕಾರಗಳನ್ನು ಮಾಡಲು ಸಾಧ್ಯವಾಗುತ್ತಿದ್ದು, ವಿದ್ಯಾರ್ಥಿಗಳು ಹೊಸ ಆವಿಷ್ಕಾರಗಳತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು. ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸುವಲ್ಲಿ ಪಾಳಕರ ಪಾತ್ರವೂ ಪ್ರಮುಖವಾಗಿರಲಿದೆ. ಉತ್ತಮ ಸಂಸ್ಕಾರ ಪಡೆಯುವ ಮೂಲಕ ಉನ್ನತ ಶಿಕ್ಷಣ ಪಡೆದು ಅವರಿಗೆ ಗೌರವ ತರುವಂತಹ ಕೆಲಸ ಮಾಡಬೇಕು. ಸಮಾಜದಲ್ಲಿ ಎಷ್ಟು ದೊಡ್ಡವರಾಗಿ ಬೆಳೆದು ಉನ್ನತ ಸ್ಥಾನಮಾನ ಗಳಿಸಿದರೂ ನಮ್ಮನ್ನು ಹೆತ್ತ ತಂದೆ-&ತಾಯಿ, ಗುರು-ಹಿರಿಯರಿಗೆ ಗೌರವ ಕೊಡಬೇಕು. ಇದನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ಹೊಸ ಸಂಶೋಧನೆಗಳನ್ನು ಮಾಡುವಾಗ ಅನೇಕ ಸವಾಲು ಹಾಗೂ ಸೋಲುಗಳು ಎದುರಾಗುತ್ತವೆ. ಈ ಸವಾಲುಗಳಿಗೆ ಹೆದರದೆ ಮೆಟ್ಟಿನಿಂತು ಮುನ್ನಡೆದಾಗ ಯಶಸ್ಸು ಪ್ರಾಪ್ತಿಯಾಗಲಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಡಾ. ಕೆ.ಶಿವನ್ ಹೇಳಿದರು.
ಇಸ್ರೋ ಸಂಸ್ಥೆಯಿಂದ ಚಂದ್ರಯಾನ ಸಂದರ್ಭದಲ್ಲಿ ಅನೇಕ ಸವಾಲುಗಳು ಎದುರಾದವು. ಜತೆಗೆ ಸೋಲುಗಳು ಉಂಟಾದವು. ಆದರೂ ವಿಜ್ಞಾನಿಗಳು ಎದೆಗುಂದದೆ, ಪ್ರಯತ್ನವನ್ನು ಮುಂದುವರೆಸಿದರ ಫಲಯಾಗಿ ಚಂದ್ರಯಾನ-&2 ಯಶಸ್ವಿಯಾಯಿತು. ಹಾಗೆಯೇ ವಿದ್ಯಾರ್ಥಿಗಳು ಸೋಲನ್ನು ಪಾಠವೆಂದು ಪರಿಗಣಿಸಿ ಮುನ್ನುಗ್ಗಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಬದುಕಿನಲ್ಲಿ ಆತ್ಮಸ್ಥೆರ್ಯ, ಕಠಿಣ ಪರಿಶ್ರಮ ಹಾಗೂ ಶೋಧನೆ ಮಾಡುವ ಮನೋಭಾವ ಬಹಳ ಮುಖ್ಯ. ಈ ಮೂರು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮುನ್ನಡೆದರೆ ಉತ್ತಮ ಜೀವನ ರೂಪಿಸಿಕೊಳ್ಳಬಹುದು ಎಂದು ತಿಳಿಸಿದರು.
ದೇಶದ ಅಭಿವೃದ್ಧಿಯಲ್ಲಿ ವಿದ್ಯಾರ್ಥಿಗಳ ಪಾತ್ರ, ಕೊಡುಗೆ ಬಹುಮುಖ್ಯವಾಗಿದೆ. ವಿದ್ಯಾರ್ಥಿಗಳು ಮೆಕ್ಯಾನಿಕಲ್, ಎಲೆಕ್ಟ್ರಾನಿಕ್, ಎಲೆಕ್ಟ್ರಾನಿಕ್ಸ್ ಸೇರಿದಂತೆ ವಿವಿಧ ವಿವಿಧ ವಿಭಾಗಗಳಲ್ಲಿ ಅನುಭವ ಪಡೆಯಬೇಕು. ಆಗ ಮಾತ್ರ ಪರಿಪೂರ್ಣತೆ ಹೊಂದಲು ಸಾಧ್ಯವಾಗುತ್ತದೆ. ನೀವು ಕಲಿತ ಶಿಕ್ಷಣ ಸಂಸ್ಥೆ ಕೃತಜ್ಞತೆ ಸಲ್ಲಿಸಬೇಕು. ಪ್ರಪಂಚದ ಯಾವ ಭಾಗದಲ್ಲಿದ್ದರೂ ಕಲಿತ ಶಿಕ್ಷಣ ಸಂಸ್ಥೆಯನ್ನು ಸದಾ ಸ್ಮರಿಸಬೇಕು ಎಂದರು. ಸಿದ್ಧಗಂಗಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಟಿ.ಕೆ.ನಂಜುಂಡಪ್ಪ, ಎಸ್ಐಟಿ ಸಿಇಒ ಡಾ.ಶಿವಕುಮಾರಯ್ಯ, ಪ್ರಾಂಶುಪಾಲ ಪ್ರೊ.ಎಸ್.ವಿ.ದಿನೇಶ್, ಮಾಲತಿ ಶಿವನ್, ಟಿ.ಎಂ.ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ಶಿವಕುಮಾರ ಸ್ವಾಮೀಜಿ ಚಿನ್ನದ ಪದಕ
ಬಿಇ ಬಯೋಟೆಕ್ನಾಲಜಿ ವಿಭಾಗದಲ್ಲಿ ಅಗ್ರಸ್ಥಾನ ಪಡೆದಿರುವ ಸ್ಪಂದನಾ ವಿ.ಸಿಂಗ್ಗೆ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಚಿನ್ನದ ಪದಕ ಸೇರಿ ಮೂರು ಚಿನ್ನದ ಪದಕಗಳಿಗೆ ಕೊರಳೊಡ್ಡಿದರು. ಇದೇ ಸಂದರ್ಭದಲ್ಲಿ ಎಂ.ಟೆಕ್.,50 ಅಭ್ಯರ್ಥಿಗಳು, ಬಿ.ಇ. ವಿವಿಧ ಕೋರ್ಸ್ಗಳ 847 ಅಭ್ಯರ್ಥಿಗಳು, ಬಿ.ಆರ್ಕ್., 35 ಅಭ್ಯರ್ಥಿಗಳು, ಎಂಸಿಎ 118 ಅಭ್ಯರ್ಥಿಗಳು ಹಾಗೂ ಎಂಬಿಎ 196 ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.