

ಕುಂದಗೋಳ: ಪೊಲೀಸರು ಜನರ ರಕ್ಷಕರಾಗಿದ್ದು, ಯಾವುದೇ ಆತಂಕವಿಲ್ಲದೆ ನಿಮ್ಮ ಸಮಸ್ಯೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದು. ಗ್ರಾಮದಲ್ಲಿ ನಡೆಯುವ ಯಾವುದೇ ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುವವರ ವಿವರಗಳನ್ನು ಗೌಪ್ಯವಾಗಿಡಲಾಗುವುದು. ಸಾರ್ವಜನಿಕರ ಸಹಭಾಗಿತ್ವವಿಲ್ಲದೆ ಅಪರಾಧಮುಕ್ತ ಸಮಾಜ ನಿರ್ವಣವಾಗದು ಎಂದು ಪಿಎಸ್ಐ ಪ್ರವೀಣ ನೇಸರಗಿ ಹೇಳಿದರು.
ತಾಲೂಕಿನ ತರ್ಲಘಟ್ಟ ಗ್ರಾಮದ ಉಡಚಮ್ಮ ದೇವಸ್ಥಾನದ ಆವರಣದಲ್ಲಿ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಪರಾಧ ತಡೆಗಟ್ಟುವ ಉದ್ದೇಶದಿಂದ ಸೋಮವಾರ ಇತ್ತೀಚೆಗೆ ವ್ಯಾಪಕವಾಗಿರುವ ಸೈಬರ್ ಅಪರಾಧಗಳ ಕುರಿತು ಜಾಗೃತಿ ಮೂಡಿಸಲಾಯಿತು. ಅಪರಿಚಿತ ಕರೆಗಳಿಗೆ ಒಟಿಪಿ, ಕೆವೈಸಿ ವಿವರ ನೀಡಿ ಮೋಸ ಹೋಗಬೇಡಿ. ಮೀಟರ್ ಬಡ್ಡಿ ದಂಧೆಯಂತಹ ಅಕ್ರಮಗಳಿಗೆ ಬಲಿಯಾಗದೆ, ತಕ್ಷಣವೇ ಠಾಣೆಗೆ ದೂರು ನೀಡಬೇಕು ಎಂದು ಸಲಹೆ ನೀಡಿದರು.
ಇದಕ್ಕೂ ಮುನ್ನ ಪಿಎಸ್ಐ ಪ್ರವೀಣ ನೇಸರಗಿ ಅವರ ನೇತೃತ್ವದಲ್ಲಿ ಸಿಬ್ಬಂದಿ ಗ್ರಾಮದ ಮನೆ ಮನೆಗೆ ತೆರಳಿ, ಸಮಾಲೋಚನೆ ನಡೆಸಿದರು. ಹಿರಿಯ ನಾಗರಿಕರ ಸಮಸ್ಯೆಗಳನ್ನು ಆಲಿಸಿ, ಅವರಲ್ಲಿ ಧೈರ್ಯ ತುಂಬುವ ಕೆಲಸ ಮಾಡಿದರು.
ಎಎಸ್ಐ ಎಂ.ಆರ್., ರಾಮನ್ ಸಿಬ್ಬಂದಿ ವೈ.ಡಿ. ಗಿರಿಯಪ್ಪನವರ, ಅಂಬರೀಶ ಬಳಿಗಾರ, ರಮೇಶ ಪೂಜಾರ, ಗ್ರಾಮ ಪಂಚಾಯಿತಿ ಸದಸ್ಯ ಶಂಭುಲಿಂಗಪ್ಪ ನಂದೆಪ್ಪನವರ, ಪಿಕೆಪಿಎಸ್ ಅಧ್ಯಕ್ಷ ಆರ್.ವಿ. ರಾಮಗೌಡ್ರ, ಬಿ.ಎಂ. ಕಜ್ಜಿ, ಇತರರಿದ್ದರು.