‘ಲೋಕ’ ಗೆಲುವಿಗೆ ಶಕ್ತಿ ಮೀರಿ ಶ್ರಮಿಸಿ

18arsph1ep
ಸೊಪ್ಪಿನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದ ಸಂಸದ ಪ್ರಜ್ವಲ್ ರೇವಣ್ಣ ಅವರು ಅಗ್ನಿ ಅವಘಡದಿಂದ ಮನೆ ಕಳೆದುಕೊಂಡವರಿಗೆ ಸಾಂತ್ವಾನ ಹೇಳುತ್ತಿರುವುದು. ಕೆ.ಎಸ್.ಚಂದ್ರಶೇಖರ್, ಶೇಖರಪ್ಪ, ಚನ್ನಬಸಯ್ಯ, ರೇಣುಕಪ್ಪ, ರಾಮಣ್ಣ ಇತರರಿದ್ದರು.
Published on

ಅರಸೀಕೆರೆ: ಲೋಕಸಭಾ ಚುನಾವಣೆ ಗೆಲುವಿಗೆ ಕಾರ್ಯಕರ್ತರು ಹಾಗೂ ಮುಖಂಡರು ಶಕ್ತಿ ಮೀರಿ ಕೆಲಸ ಮಾಡುವಂತೆ ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.

ತಾಲೂಕಿನ ರಾಂಪುರ ಗ್ರಾಮದಲ್ಲಿರುವ ನಿರ್ವಾಣ ಸಿದ್ದೇಶ್ವರಸ್ವಾಮಿ ಸನ್ನಿಧಿಗೆ ಭಾನುವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮುಖಂಡ ಶೇಖರಪ್ಪ ಅವರ ಮನೆಯಲ್ಲಿ ಮಾತನಾಡಿದರು. ವಿಧಾನಸಭಾ ಚುನಾವಣೆಯಲ್ಲಿ ಆಗಿರುವ ಹಿನ್ನಡೆ ಸರಿಪಡಿಸಿಕೊಳ್ಳುವ ಕಾಲ ಹತ್ತಿರವಾಗಿದೆ. ಸೋಲನ್ನು ಸವಾಲಾಗಿ ಸ್ವೀಕರಿಸಿ ಸಂಘಟಿತ ಹೋರಾಟ ನಡೆಸಬೇಕಿದೆ. ನಿಮ್ಮೆಲ್ಲರ ಕುಂದುಕೊರತೆ ಆಲಿಸಲು ಸದಾ ಸಿದ್ಧನಿದ್ದು, ಬೂತ್ ಮಟ್ಟದಿಂದ ಪಕ್ಷ ಸದೃಢಗೊಳಿಸಲು ಶಕ್ತಿ ಮೀರಿ ಶ್ರಮಿಸೋಣ ಎಂದು ಕರೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಫಲವಾಗಿ ನೂರಾರು ಕೋಟಿ ರೂ. ವೆಚ್ಚದ ಜಲಜೀವನ್ ಮಿಷನ್ ಯೋಜನೆ ಅನುಷ್ಠಾನಗೊಳಿಸಲಾಗಿದೆ. ರೈಲ್ವೆ ನಿಲ್ದಾಣ ಮೇಲ್ದರ್ಜೆಗೇರಿಸಲು 35 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದ್ದು, ಪ್ರಕ್ರಿಯೆ ನಡೆಯುತ್ತಿದೆ. ಸಮುದಾಯ ಭವನ ನಿರ್ಮಾಣ, ಹೈಮಾಸ್ಟ್ ದೀಪ ಸೇರಿದಂತೆ ಮೂಲಸೌಕರ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದೇನೆ ಎಂದು ಹೇಳಿದರು.

ಅಗ್ನಿ ಅವಘಡದಿಂದ ಮನೆ ಕಳೆದುಕೊಂಡಿದ್ದ ಸೊಪ್ಪಿನಹಳ್ಳಿ ಚನ್ನಬಸಯ್ಯ, ರೇಣುಕಪ್ಪ ಹಾಗೂ ರಾಮಣ್ಣ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಅವಘಡದಿಂದ ಆಗಿರುವ ನಷ್ಟ ಭರಿಸುವಂತೆ ಮಾಜಿ ಸಚಿವ ಎಚ್.ಡಿ.ರೇವಣ್ಣ ತಾಲೂಕು ಹಾಗೂ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದು, ಶೀಘ್ರವೇ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಕೆ.ಎಸ್.ಚಂದ್ರಶೇಖರ್, ಮುಖಂಡರಾದ ಶೇಖರಪ್ಪ, ಮೂರ್ತಿಣ್ಣ ಚನ್ನಬಸಯ್ಯ, ರೇಣುಕಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net