

ಅರಸೀಕೆರೆ: ನನ್ನ ಸುದೀರ್ಘ ರಾಜಕೀಯ ಪಯಣದಲ್ಲಿ ಎಲ್ಲ ಸಮುದಾಯಗಳ ಏಳಿಗೆಗೆ ಅವಿರತವಾಗಿ ಶ್ರಮಿಸಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.
ಪಟ್ಟಣದ ಮಿನ ವಿಧಾನಸೌಧ ಹಿಂಭಾಗದಲ್ಲಿರುವ ಜೆಡಿಎಸ್ ಕಚೇರಿ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಮುಖರ ಸಭೆ ಉದ್ಘಾಟಿಸಿ ಮಾತನಾಡಿದರು.
ವೀರಶೈವ-ಲಿಂಗಾಯಿತ, ಯಾದವ, ಮುಸ್ಲಿಂ, ಕುರುಬ, ಪರಿಶಿಷ್ಟ ಜಾತಿ, ಪಂಗಡಗಳ ಜನರ ಕಲ್ಯಾಣಕ್ಕೆ ಹಗಲಿರುಳು ದುಡಿದ್ದೇನೆ. ದಿ.ಡಿ.ಬಿ.ಗಂಗಾಧರಪ್ಪ, ಆನಿವಾಳ ನಂಜಪ್ಪರನ್ನು ಶಾಸಕರಾಗಿ ವಿಧಾನಸಭೆಗೆ ಕಳುಹಿಸಲು ಹೋರಾಟ ಮಾಡಿದ್ದೇನೆ. ಲಚ್ಚಾನಾಯ್ಕಾ, ವತ್ಸಲಾ ಶೇಖರಪ್ಪ ಅವರಂತಹ ಹಲವರಿಗೆ ಜಿಲ್ಲಾ ಪಂಚಾಯಿತಿಯಲ್ಲಿ ಸ್ಥಾನಮಾನ, ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕೇಂದ್ರಕ್ಕೆ ಪತ್ರ…ಹೀಗೆ ಎಲ್ಲ ಸಮುದಾಯಗಳ ಜನರ ಹಿತ ಬಯಸಿರುವ ತೃಪ್ತಿ ನನಗಿದೆ. ಹತ್ತಿದ ಏಣಿ ಒದ್ದವರ ಬಗ್ಗೆ ಚರ್ಚಿಸುವುದು ಅನಗತ್ಯ. ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಒಗ್ಗೂಡಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.
ವಿಧಾನಸಭಾ ಚುನಾವಣೆ ಸೋಲಿನ ಬಳಿಕ ಸಂತೋಷ್ ಕ್ಷೇತ್ರದಲ್ಲಿ ಇರಲಿಲ್ಲವೆಂಬ ಮಾತುಗಳು ಕೇಳಿಬಂದಿತ್ತು. ಮುಂದೆ ನೀವೇ ವಿಧಾನಸಭೆ ಪ್ರವೇಶಿಸಿಸುತ್ತೀರಿ, ಆತಂಕ ಬೇಡ ಎಂದ ಅವರು, ಬಾಣಾವರ ಅಶೋಕ್ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಕಳುಹಿಸುವೆ. ಕೊಟ್ಟ ಮಾತಿಗೆ ನಾನು ಎಂದಿಗೂ ತಪ್ಪುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅಪರೂಪದ ವ್ಯಕ್ತಿತ್ವದ ಮನುಷ್ಯ ಎನ್ನುವುದು ಅವರು ತೋರಿದ ಗೌರವದಿಂದ ಸಾಬೀತಾಗಿದೆ ಎಂದು ಬಣ್ಣಿಸಿದರು.
ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ನಾಲ್ಕೂವರೆ ವರ್ಷದಲ್ಲಿ ಹಾಸನ ಲೋಕಸಭಾ ಕ್ಷೇತ್ರಕ್ಕೆ ಅಂದಾಜು ಎಂಟೂವರೆ ಸಾವಿರ ಕೋಟಿ ರೂ. ಅನುದಾನ ತರಲಾಗಿದೆ. ಜಲಜೀವನ್ ಮಿಷನ್ ಯೋಜನೆ, ಸಮುದಾಯ ಭವನಗಳ ನಿರ್ಮಾಣಕ್ಕೆ ಅನುದಾನ ಸೇರಿದಂತೆ ನಿರೀಕ್ಷೆಗೂ ಮೀರಿ ಕೆಲಸ ಮಾಡಲಾಗಿದೆ. ನನ್ನ ಅವಧಿಯಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳ ಮಾಹಿತಿ ಪುಸ್ತಕವನ್ನು ಶೀಘ್ರ ಬಿಡುಗಡೆ ಮಾಡಲಾಗುವುದು. ಜೆಡಿಎಸ್‌ನಲ್ಲಿ ಅಧಿಕಾರ ಅನುಭವಿಸಿ ಅನ್ಯ ಪಕ್ಷ ಸೇರಿರುವವರಿಗೆ ಅವಕಾಶ ನೀಡುವ ಪ್ರಶ್ನೆಯೇ ಇಲ್ಲ ಎಮದು ಶಾಸಕ ಕೆ.ಎಂ.ಶಿವಲಿಂಗೇಗೌಡ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಜೆಡಿಎಸ್ ಮುಖಂಡ ಎನ್.ಆರ್.ಸಂತೋಷ್ ಮಾತನಾಡಿ, ದೇವೇಗೌಡರ ಆಶಿರ್ವಾದ ನಮ್ಮೆಲ್ಲರ ಮೇಲಿದ್ದು ಲೋಕಸಭಾ ಚುನಾವಣೆಯಲ್ಲಿ ಲಕ್ಷಕ್ಕೂ ಅಧಿಕ ಮತ ಕೊಡಿಸಲು ಹೋರಾಟ ಮಾಡಲಾಗುವುದು. ಚತುಷ್ಪಥ ಹೆದ್ದಾರಿ ಕಾಮಗಾರಿಯಲ್ಲಿ ಭೂಮಿ ಕಳೆದುಕೊಂಡಿದ್ದ ಬೆಂಡೇಕೆರೆ ಗ್ರಾಮದ ರೈತರ ಪರವಾಗಿ ಸಂಸದ ಪ್ರಜ್ವಲ್ ರೇವಣ್ಣ, ಮಾಜಿ ಸಚಿವ ಎಚ್.ಡಿ.ರೇವಣ್ಣ ವಾಸ್ತವ ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಪರಿಹಾರದ ಮೊತ್ತ ಹೆಚ್ಚಾಗಿದೆ. ಒಂದು ಸಮುದಾಯವನ್ನು ಟಾರ್ಗೆಟ್ ಮಾಡಿದ್ದ ವ್ಯಕ್ತಿಗೆ ಸರಿಯಾದ ಉತ್ತರ ಕೊಡಿಸುವಲ್ಲಿ ಉಭಯ ಮುಖಂಡರು ಶ್ರಮಿಸಿದ್ದಾರೆ. ಕ್ಷೇತ್ರದ ಮತದರಾರ ಋಣ ನನ್ನ ಮೇಲಿದ್ದು ಕ್ಷೇತ್ರ ತೊರೆಯುವ ಪ್ರಶ್ನೆಯೇ ಇಲ್ಲ. ಶೀಘ್ರವೇ ಎಲ್ಲ ಮುಖಂಡರ ಜತೆ ಪ್ರವಾಸ ಆರಂಭಿಸಲಿದ್ದೇನೆ ಎಂದರು.
ಜಿಪಂ ಮಾಜಿ ಸದಸ್ಯ ಬಾಣಾವರ ಅಶೋಕ್ ಮಾತನಾಡಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಎಚ್‌ಡಿಕೆ, ಎಚ್.ಡಿ.ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ನೀಡಿದ ಅನುದಾನವನ್ನು ತಮ್ಮದೇ ಎಂದು ಬಿಂಬಿಸಿಕೊಳ್ಳುತ್ತಿರುವ ಶಾಸಕ ಕೆ.ಎಂ.ಶಿವಲಿಂಗೇಗೌಡ ಈಗ ಸಾಧನೆ ಮಾಡಿ ತೋರಿಸಲಿ ಎಂದು ಸವಾಲೆಸೆದರು.
ಜಿಪಂ ಮಾಜಿ ಸದಸ್ಯೆ ವತ್ಸಲಾ ಶೇಖರಪ್ಪ, ಮಾತನಾಡಿದರು. ಮಾಜಿ ಶಾಸಕ ಜಿ.ಎಸ್.ಪರಮೇಶ್ವರಪ್ಪ, ಜಿಲ್ಲಾಧ್ಯಕ್ಷ ಕೆ.ಎಸ್.ಲಿಂಗೇಶ್, ಮುಖಂಡರಾದ ರಾಂಪುರ ಶೇಖರಪ್ಪ, ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್,ನಗರಸಭೆ ಸದಸ್ಯ ಈಶ್ವರಪ್ಪ, ಮಾಜಿ ಅಧ್ಯಕ್ಷರಾದ ಪಂಚಾಕ್ಷರಿ, ದೇವಕುಮಾರ್, ಮುಖಂಡರಾದ ಹೊಸೂರು ಗಂಗಾಧರ್, ತಾಪಂ ಮಾಜಿ ಸದಸ್ಯರಾದ ಬೋಜಾನಯ್ಕ, ಬಸವಲಿಂಗಪ್ಪ, ಶೇಖರನಾಯ್ಕ, ಪುಟ್ಟಸ್ವಾಮಿ, ಕೆಂಕೆರೆ ಕೇಶವಮೂರ್ತಿ ಇತರರು ಹಾಜರಿದ್ದರು. ಜೆಡಿಎಸ್ ಚಿಹ್ನೆಯಡಿ ಗೆಲುವು ಸಾಧಿಸಿದ್ದ ನಗರಸಭೆ ಸದಸ್ಯರು ನೋಟಿಸ್ ನೀಡಿದ್ದರೂ ಸಭೆಗೆ ಗೈರಾಗಿದ್ದರು.