

ಮೈಸೂರು:ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಜೂ.9ರಂದು ಬಸವ ಜಯಂತಿ ಆಯೋಜಿಸಲಿದ್ದು, ಯಶಸ್ವಿಗೊಳಿಸಬೇಕು ಎಂದು ಬಸವ ಬಳಗಗಳ ಒಕ್ಕೂಟದ ಅಧ್ಯಕ್ಷ ಪ್ರದೀಪ್‌ಕುಮಾರ್, ಮಹಿಳಾ ಬಸವ ಬಳಗಗಳ ಪದಾಧಿಕಾರಿಗಳು, ಸದಸ್ಯರನ್ನು ಕೋರಿದರು.
ಬಸವ ಜಯಂತಿಯ ಯಶಸ್ಸಿಗಾಗಿ ರೂಪುರೇಷೆ ಸಿದ್ಧಪಡಿಸುವ ಸಂಬಂಧ ನಗರದ ನಟರಾಜ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಹಲವು ವಿಷಯಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು.
ಈ ಬಾರಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸುವುದರ ಜತೆಗೆ ಅದ್ದೂರಿಯಾಗಿ ಮಾಡಲು ನಿರ್ಧರಿಸಲಾಗಿದೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಕಾರ್ಯಕ್ರಮ ಆಯೋಜಿಸಲಾಗುವುದು. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.
ವೇದಿಕೆ ಕಾರ್ಯಕ್ರಮ, ಮೆರವಣಿಗೆ ಊಟದ ವ್ಯವಸ್ಥೆ ಸೇರಿದಂತೆ ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡಬೇಕಿದೆ. ಜತೆಗೆ ಸಮುದಾಯದ ಎಲ್ಲರನ್ನೂ ಇದರಲ್ಲಿ ಒಳಗೊಳ್ಳುವಂತೆ ಮಾಡಲು ಯೋಜನೆ ಸಿದ್ಧಪಡಿಸಲಾಗುವುದು. ಇದಕ್ಕಾಗಿ ಹಗಲಿರುಳು ಶ್ರಮ ವಹಿಸಲಾಗುತ್ತಿದೆ. ಸಮಾಜದ ಹಿರಿಯರು, ಮಠಾಧೀಶರು ಸೇರಿದಂತೆ ಗಣ್ಯರ ಸಲಹೆ ಪಡೆದು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಲಾಗುವುದು ಎಂದು ಹೇಳಿದರು.
ಮಹಿಳಾ ಬಸವ ಬಳಗಗಳ ಪದಾಧಿಕಾರಿಗಳಾದ ಮಂಗಳಾ ಮುದ್ದುಮಾದಪ್ಪ, ಜಯಾಗೌಡ, ಚಂಚಲಾ ಸ್ವಾಮಿ, ಮಂಜುಳಾ ರವಿ, ಜ್ಯೋತಿ ರೇಚಣ್ಣ, ರಾಜೇಶ್ವರಿ ಮಹೇಶ್, ಗೀತಾ ಈಶ್ವರ್, ಶಿವಮಣಿ ಇತರರಿದ್ದರು.