

ಸರಗೂರು: ವೀರಶೈವ ಲಿಂಗಾಯತ ಸಮಾಜ ಸಂಘಟಿತವಾಗಬೇಕಿದ್ದು, ಮುಖಂಡರು ವೈಯಕ್ತಿಕ ಹಿತಾಸಕ್ತಿ ಮರೆತು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಹಿನಕಲ್ ಬಸವರಾಜು ಹೇಳಿದರು.
ತಾಲೂಕಿನ ಪಟ್ಟಣದ ಜೆಎಸ್‌ಎಸ್ ಶಿವಾನುಭವ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಅಧ್ಯಕ್ಷರು ಹಾಗೂ ನಿರ್ದೇಶಕ ಪದಾಧಿಕಾರಿಗಳ ಪದಗ್ರಹಣ ಮತ್ತು ಮಹಾಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಂಘಟನೆ, ಒಗ್ಗಟ್ಟು, ಐಕ್ಯತೆ ಇದ್ದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಮಹಾಸಭೆಯಲ್ಲಿ ಸಮಾಜದ ಎಲ್ಲರೂ ಭಾಗವಹಿಸುವ ಮೂಲಕ ಲಿಂಗಾಯತ ಸಮಾಜ ಸಂಘಟಿತವಾಗಿದೆ ಎಂಬುದನ್ನು ಇಡೀ ದೇಶಕ್ಕೆ ತೋರಿಸಬೇಕು. ಸಮಾಜದ ಏಳಿಗೆಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಸೇವೆ ಶ್ಲಾಘನೀಯ ಎಂದರು.
ದಡದಹಳ್ಳಿ ಮಠದ ಷಡಕ್ಷರ ಸ್ವಾಮೀಜಿ ಮಾತನಾಡಿ, ರಾಜ್ಯದಲ್ಲಿ 60 ಲಕ್ಷಕ್ಕೂ ಅಧಿಕ ಲಿಂಗಾಯತ ಸಮಾಜದ ಜನರಿದ್ದಾರೆ. ಆದರೆ, ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಮೀಸಲಾತಿಗಾಗಿ ಹಲವು ಬಾರಿ ಹೋರಾಟ ನಡೆಸಿದರೂ ಈವರೆಗೂ ಮಾನ್ಯತೆ ದೊರೆತಿಲ್ಲ. ಸರ್ಕಾರವು ಒಡೆದು ಆಳುವ ನೀತಿ ಅನುಸರಿಸುತ್ತಿದ್ದು, ಸಮಾಜಕ್ಕೆ ಅನ್ಯಾಯ ಮಾಡುತ್ತಿದೆ. ಒಗ್ಗಟ್ಟಿನ ಕೊರತೆ, ರಾಜಕಾರಣಿಗಳ ಹಸ್ತಕ್ಷೇಪದಿಂದ ಸಮಾಜ ಹಿಂದುಳಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಲಿಂಗಾಯತ ಸಮಾಜ ವತಿಯಿಂದ ಎರಡು ಎಕರೆ ಜಮೀನು ತೆಗೆದುಕೊಂಡು ಸುಮಾರು ವರ್ಷಗಳ ಕಳೆದಿದೆ. ಅದರೆ ಇನ್ನೂ ಬಸವ ಭವನ ನಿರ್ಮಾಣ ಕಾರ್ಯ ರೂಪಕ್ಕೆ ಬಂದಿಲ್ಲ. ಶೀಘ್ರದಲ್ಲೇ ಭವನಕ್ಕೆ ನಿರ್ಮಾಣ ಮಾಡಲು ಮುಂದಾಗಿ ಎಂದು ಸಲಹೆ ನೀಡಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಕೆ.ಎಸ್.ವೀರಭದ್ರಪ್ಪ ಮಾತನಾಡಿ, ವರ್ತಮಾನ ಮತ್ತು ಭವಿಷ್ಯಕ್ಕೆ ಇತಿಹಾಸ ದಾರಿದೀಪ. ವೀರಶೈವ ಧರ್ಮಕ್ಕೆ ಪ್ರಾಚೀನ ಇತಿಹಾಸವಿದ್ದು, ಭವ್ಯ ಪರಂಪರೆಯಿದೆ. ಪುಟ್ಟ ಪುಸ್ತಕ ಬದಲಿಸಬಹುದು. ಆದರೆ ಇತಿಹಾಸ ಬದಲಿಸಲಾಗದು. ಧರ್ಮಾಚರಣೆಯಿಲ್ಲದ ಮನುಷ್ಯನ ವ್ಯಕ್ತಿತ್ವಕ್ಕೆ ಬೆಲೆ, ನೆಲೆ ಸಿಗಲಾರದು. ಅಂತರಂಗ, ಬಹಿರಂಗ ಶುದ್ಧಿಗೆ ಪ್ರಾಧಾನ್ಯತೆ ಕೊಟ್ಟು ಧರ್ಮ ವೀರಶೈವ ಎಂಬುದನ್ನು ಮರೆಯಬಾರದು. ಧರ್ಮದಿಂದ ಮನುಷ್ಯ ವಿಮುಖನಾದರೆ ಬದುಕು ಅಶಾಂತಿ ಕೊಡಲಾಗುತ್ತದೆ ಎಂದರು.
ಹಂಚೀಪುರ ಸಿದ್ದಮಲ್ಲೇಶ್ವರ ಪಟ್ಟದ ಮಠದ ಚನ್ನಬಸವ ಸ್ವಾಮೀಜಿ, ಪಡುವಲು ವಿರಕ್ತ ಮಠದ ಶ್ರೀ ಮಹದೇವ ಸ್ವಾಮೀಜಿ ಆಶೀರ್ವಚನನೀಡಿದರು. ಕೋಟೆ ಅಧ್ಯಕ್ಷ ರುದ್ರಪ್ಪ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ನಿರ್ದೇಶಕ ಯು.ಎಸ್.ಬಸವರಾಜು, ಕಂಡೇಶ್, ಜಿಲ್ಲಾ ನಿರ್ದೇಶಕ ಮೊತ್ತ ಬಸವರಾಜಪ್ಪ, ಬಿ.ವಿ.ಬಸವರಾಜು, ಕೆ.ಗಿರಿ ಕುಮಾರ್, ಮಾಜಿ ಅಧ್ಯಕ್ಷ ಶಿವರಾಜು, ಪಪಂ ಉಪಾಧ್ಯಕ್ಷ ಶಿವಕುಮಾರ್, ಮಹದೇವಪ್ಪ, ತಾಲೂಕು ಕಾರ್ಯಾಧ್ಯಕ್ಷ ಸಿ.ಕೆ.ಗಿರೀಶ್, ಉಪಾಧ್ಯಕ್ಷ ಮೋಹನಕುಮಾರ್, ಮಂಜುಳಾ ದೇವಣ್ಣ, ಡಿ.ಸಿ.ಸಿದ್ದಪ್ಪ, ಕೋಶಾಧ್ಯಕ್ಷ ಸಿ.ಎನ್.ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಮನುಗನಹಳ್ಳಿ ಗುರುಸ್ವಾಮಿ ಇತರರು ಇದ್ದರು.