ಕಪ್ಪಡಿ ವಾರ್ಷಿಕ ಜಾತ್ರೆಗೆ ಯಶಸ್ಸಿಗೆ ಶ್ರಮಿಸಿ

26 KRN-1
ಕೆ.ಆರ್.ನಗರ ತಾಲೂಕಿನ ಕಪ್ಪಡಿ ಕ್ಷೇತ್ರದಲ್ಲಿ ನಡೆದ ವಾರ್ಷಿಕ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಶಾಸಕ ಡಿ.ರವಿಶಂಕರ್ ಮಾತನಾಡಿದರು. ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ, ಇಒ ಕುಲದೀಪ್, ಉದಯಶಂಕರ್, ಸೈಯದ್‌ಜಾಬೀರ್, ಎಚ್.ಎಚ್.ನಾಗೇಂದ್ರ, ಪರಶುರಾಮು ಇತರರು ಇದ್ದರು.
Published on

ಕೆ.ಆರ್.ನಗರ: ಫೆ.26 ರಿಂದ ಮಾ.25ರವರೆಗೆ ಒಂದು ತಿಂಗಳ ಕಾಲ ನಡೆಯುವ ತಾಲೂಕಿನ ಕಪ್ಪಡಿ ಕ್ಷೇತ್ರದ ಇತಿಹಾಸ ಪ್ರಸಿದ್ಧ ವಾರ್ಷಿಕ ಮಹಾಜಾತ್ರೆಯ ಯಶಸ್ಸಿಗೆ ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಹೆಬ್ಬಾಳು ಹೋಬಳಿಯ ಕಪ್ಪಡಿ ರಾಚಪ್ಪಾಜಿ ಅವರ ಗದ್ದುಗೆಯ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಜಾತ್ರಾ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಲ್ಲಿಗೆ ಬೇರೆಡೆಯಿಂದ ಬರುವ ಭಕ್ತಾದಿಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.

ಪ್ರಮುಖವಾಗಿ ಕುಡಿಯುವ ನೀರು, ಬೆಳಕಿನ ವ್ಯವಸ್ಥೆ, ಸ್ವಚ್ಛತೆ, ತಾತ್ಕಾಲಿಕ ಶೌಚಗೃಹ ಸ್ಥಾಪನೆ, ಮಹಿಳೆಯರು ಮತ್ತು ಪುರುಷರ ವಸ್ತ್ರ ಬದಲಾವಣೆಯ ಕೊಠಡಿ, ಸಾರಿಗೆ ಸಂಚಾರ, ಭದ್ರತೆ ಸೇರಿದಂತೆ ಇತರ ಎಲ್ಲ ಅನುಕೂಲತೆಗಳ ಬಗ್ಗೆ ಅಧಿಕಾರಿಗಳು ಪರಸ್ಪರ ಸಮನ್ವಯ ಸಾಧಿಸಿ ದೂರುಗಳು ಮತ್ತು ಅಗತ್ಯತೆ ಇದ್ದರೆ ನನ್ನ ಗಮನಕ್ಕೆ ತರಬೇಕು ಎಂದು ಸೂಚಿಸಿದರು.

ಹೆಬ್ಬಾಳು ಗ್ರಾಮ ಪಂಚಾಯಿತಿಯವರು ಬುಧವಾರದಿಂದಲೇ ತಾತ್ಕಾಲಿಕ ನಲ್ಲಿಗಳನ್ನು ಅಳವಡಿಸುವುದರ ಜತೆಗೆ ಅಗತ್ಯ ಇರುವೆಡೆ ವಿದ್ಯುತ್ ಕಂಬಗಳಿಗೆ ಬಲ್ಭ್ ಹಾಕಿಸಿ ಸಮರ್ಪಕವಾಗಿ ಬೆಳಕಿನ ಅನುಕೂಲ ಕಲ್ಪಿಸಬೇಕು ಎಂದು ತಾಕೀತು ಮಾಡಿದ ಶಾಸಕರು, ಅಬಕಾರಿ ಇಲಾಖೆ ಅವರು ಕಟ್ಟುನಿಟ್ಟಿನ ಕ್ರಮ ಕೈಗೊಂಡು ಅಕ್ರಮ ಮದ್ಯ ಮಾರಾಟ ತಡೆಯಬೇಕು ಎಂದು ಕಟ್ಟಾಜ್ಞೆ ಹೊರಡಿಸಿದರು.

ಜಾತ್ರೆಯ ಆರಂಭದಿಂದ ಅಂತ್ಯದವರೆಗೂ ಜಲ ಸಂಪನ್ಮೂಲ ಇಲಾಖೆಯ ಅಧಿಕಾರಿಗಳು ನಾಲೆಗಳಿಗೆ ಸಮಪರ್ಕವಾಗಿ ನೀರು ಹರಿಯಬಿಡಬೇಕು ಎಂದು ತಿಳಿಸಿದರು.

ಇಲ್ಲದೆ ಆರೋಗ್ಯ ಇಲಾಖೆಯವರು ತಾತ್ಕಾಲಿಕ ಆಸ್ಪತ್ರೆ ತೆರೆದು ಉತ್ತಮ ಚಿಕಿತ್ಸೆ ನೀಡಬೇಕು. ಕಪ್ಪಡಿ ಕ್ಷೇತ್ರದ ಬಳಿ ಕಾವೇರಿ ನದಿಗೆ ಸೇತುವೆ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಈಗಾಗಲೇ 25 ಕೋಟಿ ರೂ. ಅನುದಾನ ಮಂಜೂರು ಮಾಡಿದೆ. ಹೀಗಾಗಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳನ್ನು ಆಹ್ವಾನಿಸಿ ಇದರ ಜತೆಗೆ ಕ್ಷೇತ್ರದ ವ್ಯಾಪ್ತಿಯ ಇತರ ಅಭಿವೃದ್ಧಿ ಕೆಲಸಗಳಿಗೂ ಚಾಲನೆ ಕೊಡಿಸುವುದಾಗಿ ಪ್ರಕಟಿಸಿದರು.

ಹೆಬ್ಬಾಳು ಗ್ರಾ.ಪಂ. ಅಧ್ಯಕ್ಷ ಕಾಂತರಾಜು, ಉಪಾಧ್ಯಕ್ಷ ನಾಗೇಶ್, ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ, ಇಒ ಕುಲದೀಪ್, ಟಿಎಚ್‌ಒ ಡಾ.ಡಿ.ನಟರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಉದಯಶಂಕರ್, ಎಂ.ಎಸ್.ಮಹದೇವ್, ವಕ್ತಾರ ಸೈಯದ್‌ಜಾಬೀರ್, ಎಪಿಎಂಸಿ ಮಾಜಿ ಉಪಾಧ್ಯಕ್ಷ ಎಚ್.ಎಚ್.ನಾಗೇಂದ್ರ, ಮುಖಂಡರಾದ ಪರಶುರಾಮು, ಸಿ.ಟಿ.ಶಿವರಾಜು, ವೆಂಕಟರಾಮು, ಹೆಬ್ಬಾಳು ಸ್ವಾಮಿ, ಕುಂಟೇಗೌಡ, ರಾಘವೇಂದ್ರ, ನಾರಾಯಣಸ್ವಾಮಿ, ಕೆಂಪರಾಜು, ಲೋಕೇಶ್, ಮಠದ ಆಡಳಿತಾಧಿಕಾರಿಗಳ ಚೇತನ್‌ದಾಸ್‌ಅರಸ್, ಲಿಂಗರಾಜು ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net