ಮುಂದಿನ ಸ್ಪರ್ಧೆಗಳಲ್ಲಿ ಇನ್ನೂ ಹೆಚ್ಚಿನ ಸಾಧನೆಗೆ ಪ್ರಯತ್ನ

22hgr1
ಹಲಗೂರಿನ ಜೆಜೆ ಪಬ್ಲಿಕ್ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಶರಣ್ಯ ಅವರನ್ನು ಸನ್ಮಾನಿಸಲಾಯಿತು. ಕೆ.ಜೆ. ಸೋಮಶೇಖರ್, ಕೆ.ಎನ್.ಲಲಿತಾಂಬ, ಬಿ.ಸುಮಿತ್ರಾ, ಲೀಲಾವತಿ, ವಿಕಾಸ್ ಇತರರು ಇದ್ದರು.
Published on

ಹಲಗೂರು: ಹೈದರಾಬಾದ್‌ನಲ್ಲಿ ಆಯೋಜಿಸಿದ್ದ ವೇದಗಣಿತ ಪತ್ರ ವಾಚನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಬರುತ್ತದೆ ಎಂದು ನಿರೀಕ್ಷಿಸಿದ್ದೆ. ಆದರೆ, ದ್ವಿತೀಯ ಸ್ಥಾನ ಬಂದಿದೆ. ಮುಂದಿನ ದಿನಗಳಲ್ಲಿ ಪ್ರಥಮ ಸ್ಥಾನ ಪಡೆಯುವ ನಿಟ್ಟಿನಲ್ಲಿ ಶ್ರಮ ವಹಿಸುತ್ತೇನೆ ಎಂದು ಜೆಜೆ ಪಬ್ಲಿಕ್ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಶರಣ್ಯ ಹೇಳಿದರು.

ಇಲ್ಲಿನ ಚನ್ನಪಟ್ಟಣ ರಸ್ತೆಯಲ್ಲಿರುವ ಜೆಜೆ ಪಬ್ಲಿಕ್ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಅಂತರ ಶಾಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಮಂಡ್ಯದ ತೂಬಿನಕೆರೆಯಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಹೈದರಾಬಾದ್‌ನಲ್ಲಿ ನಡೆದ ಜೋನಲ್ ಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದೇನೆ. ಪ್ರಥಮ ಸ್ಥಾನ ಬರುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಕೆಲ ಅಂತರದಲ್ಲಿ ಕೈತಪ್ಪಿದೆ. ಮುಂದಿನ ದಿನಗಳಲ್ಲಿ ಪ್ರಥಮ ಸ್ಥಾನ ಪಡೆದು ಬರುತ್ತೇನೆ. ಮುಂದಿನ ಸ್ಪರ್ಧೆಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲು ಪ್ರಯತ್ನಿಸುತ್ತೇನೆ ಎಂದರು.

ಜೆಜೆ ಪಬ್ಲಿಕ್ ಶಾಲೆ ಶಿಕ್ಷಣ ಸಂಯೋಜಕ ವಿಕಾಸ್ ಮಾತನಾಡಿ, ಹೈದರಾಬಾದ್‌ನಲ್ಲಿ ನಡೆದ ಜೋನಲ್ ಮಟ್ಟದಲ್ಲಿ 122 ಬಾಲಕರು, 90 ಬಾಲಕಿಯರು, 95 ಶಿಕ್ಷಕರನ್ನೊಳಗೊಂಡ ಕಠಿಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆಯುವುದು ಸುಲಭದ ಮಾತಲ್ಲ. ಆದ್ದರಿಂದ ವಿದ್ಯಾರ್ಥಿನಿ ಶರಣ್ಯಳಿಗೆ ಶಾಲೆ ಆಡಳಿತ ಮಂಡಳಿ, ಶಿಕ್ಷಕರು, ಶಿಕ್ಷಕಿಯರ ಪರವಾಗಿ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಶಿಕ್ಷಕರ ಸಲಹೆ ಪಡೆದು ಮುನ್ನಡೆದರೆ ಯಶಸ್ಸಿನ ಹಾದಿ ಪಡೆಯಬಹುದು ಎಂದು ತಿಳಿಸಿದರು.

ಶಾಲೆ ಸಂಸ್ಥಾಪಕ ಅಧ್ಯಕ್ಷ ಕೆ.ಜೆ. ಸೋಮಶೇಖರ್, ಪ್ರಾಂಶುಪಾಲೆ ಕೆ.ಎನ್.ಲಲಿತಾಂಬ, ಶಿಕ್ಷಕಿಯರಾದ ಬಿ.ಸುಮಿತ್ರಾ, ಲೀಲಾವತಿ, ಶಿಕ್ಷಕ ಎಸ್.ವಿಕಾಸ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net