ಗ್ರಾಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು

strike
Published on

ಹಳಿಯಾಳ : ತಾಲೂಕಿನ ನಂದಿಗದ್ದಾ ಗ್ರಾಮದ ಸರ್ವರು ತಮ್ಮ ಎಲ್ಲ ಕೆಲಸ ಕಾರ್ಯಗಳನ್ನು ಸಂಪೂರ್ಣ ಗ್ರಾಮ ಬಂದ್ ಮಾಡಿ  ಗ್ರಾಮಕ್ಕೆ ಬೇಕಾದ ಪ್ರಮುಖ  ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜನಗಾ ಗ್ರಾಮ ಪಂಚಾಯಿತಿಗೆ ತೆರಳಿ ಗ್ರಾಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ  ಸೋಮವಾರ ನಡೆದಿದೆ.

ಗ್ರಾಮದಲ್ಲಿ  ಅಂಗನವಾಡಿಯ ಜಾಗವನ್ನು ಒತ್ತುವರಿ ಮಾಡಿರುವುದನ್ನು ಖಂಡಿಸಿ ನಂದಿಗದ್ದಾ ಗ್ರಾಮಸ್ಥರು ತಮ್ಮ ಸ್ವ  ಗ್ರಾಮವನ್ನು ಬಂದ್ ಮಾಡಿ ಜನಗಾ ಗ್ರಾಮಕ್ಕೆ ತೆರಳಿ ಪ್ರತಿಭಟನೆ ನಡೆಸಿದರು.

ಸೋಮವಾರ ಹಠಾತ್ ಪ್ರತಿಭಟನೆ‌ ಆರಂಭಿಸಿದ ಗ್ರಾಮಸ್ಥರು ಬೇಡಿಕೆ ಈಡೇರಿಸುವ ಭರವಸೆಯನ್ನು ಸಂಬಂಧಪಟ್ಟವರು  ಲಿಖಿತವಾಗಿ ಕೊಡುವವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಚ್ಚರಿಕೆ ನೀಡಿದರು.

ಗ್ರಾಮಸ್ಥರ ಬೇಡಿಕೆ ಏನು ?? :-    ಗ್ರಾಮದಲ್ಲಿ ಎರಡು ಅಂಗನವಾಡಿ ಕೇಂದ್ರಗಳಿದ್ದು, ಒಂದು ಸರ್ಕಾರದ ಅಂಗನವಾಡಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇನ್ನೊಂದು ಅಂಗನವಾಡಿ ಕೇಂದ್ರ ನಂದಿಗದ್ಧಾ ಗ್ರಾಮದ ಯುವಕ ಮಂಡಳ ಕಟ್ಟಡದಲ್ಲಿ ಹಲವು ವರ್ಷಗಳಿಂದ ನಡೆಸುತ್ತಿದ್ದಾರೆ.

ಗ್ರಾಮದಲ್ಲಿ ಗಾವಠಾಣದಲ್ಲಿ ಗ್ರಾಮ ಪಂಚಾಯತಿಯಿಂದ ಹೊಸ ಅಂಗನವಾಡಿ ಕೇಂದ್ರದ ಕಟ್ಟಡಕ್ಕೆ ಜಾಗೆ ಗುರುತಿಸಿದ್ದು, ಆ ಜಾಗೆಯನ್ನು  ರಾಜಪ್ಪಾ ರಾಮಣ್ಣಾ ಮೇತ್ರಿ ಇವರು ಅತೀಕ್ರಮಣ ಮಾಡಿದ್ದು ಸದರ ಜಾಗೆ ತೆರವು ಮಾಡಿಕೋಡಲು ಹಲವು ಬಾರಿ ವಿನಂತಿಸಿದರೂ ಸಹ ಅತೀಕ್ರಮಣ ತೆರವು ಮಾಡುತ್ತೀಲ್ಲಾ ಎಂದು  ತಾಲೂಕಾಡಳಿತಕ್ಕೆ ಸಲ್ಲಿಸಿರುವ ಮನವಿಯಲ್ಲಿ ವಿವರಿಸಲಾಗಿದೆ.‌

ಪ್ರತಿಭಟನೆ ವಿಷಯ ತಿಳಿದು  ಸ್ಥಳಕ್ಕೆ ದೌಡಾಯಿಸಿದ ಹಳಿಯಾಳ ತಾಪಂ ಪ್ರಭಾರಿ  ಇಓ ಸತೀಶ್ ,ಪಿಎಸ್ ಐ ಅಮೀನ್ ಅತ್ತಾರ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು ಆದರೆ ನಂದಿಗದ್ದಾ ಗ್ರಾಮಸ್ಥರು ತಮ್ಮ ಬೇಡಿಕೆ ಈಡೇರುವವರೆಗೆ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು.

ಈ ಸಂಬಂಧ ಜನಗಾ ಗ್ರಾಪಂ ಪಿಡಿಓಗೆ ಮೂರು ಭಾರಿ ಮನವಿ ಸಲ್ಲಿಸಿದರು ಕೂಡ ತಲೆ ಕೆಡಿಸಿಕೊಳ್ಳದ ಪಿಡಿಓ  ಗ್ರಾಮಸ್ಥರಿಗೆ ಗೌರವ ನಿಡದೆ ಸಮಸ್ಯೆ ಉಲ್ಬಣವಾಗಲು ಕಾರಣವಾಗಿದೆ ಎಂದು  ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. 

ಪ್ರತಿಭಟನೆಯ ತೀವೃತೆಯನ್ನು ಅರಿತ ಅಧಿಕಾರಿಗಳು  ಲಿಖಿತವಾಗಿ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು. ಪ್ರತಿಭಟನೆಯಲ್ಲಿ ಊರಿನ ಹಿರಿಯರಾದ ಮಂಜುನಾಥ ತೊರ್ಲೆಕರ, ಮಹಾದೇವ ಬಡಂಗಿ,  ಮಂಜುನಾಥ ಕಾನೋಜಿ, ಪುಂಡಲೀಕ ಕಲಕೇರಿ, ನೀಲಕಂಠ ಬಡಂಗಿ, ಮಂಜು ಗೌಡಾ,  ಅರ್ಜುನ ಸೋನಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net