ಗ್ರಾಪಂ ಕಟ್ಟಡ ಸ್ಥಳಾಂತರಕ್ಕೆ ಆಗ್ರಹಿಸಿ ಗ್ರಾಮಸ್ಥರಿಂದ ತಾಪಂಗೆ ಮುತ್ತಿಗೆ

Strike
Published on

ಹೊನ್ನಾವರ: ಭೂಕುಸಿತದ ಅಪಾಯದಲ್ಲಿರುವ ಬೇರಂಕಿ ಗ್ರಾಮ ಪಂಚಾಯಿತಿ ಕಚೇರಿ ಕಟ್ಟಡವನ್ನು ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ತಾ.ಪಂ.ಕಚೇರಿಗೆ ಮುತ್ತಿಗೆ ಹಾಕಿದ ಘಟನೆ ಶುಕ್ರವಾರ ನಡೆದಿದೆ.

ಕಳೆದ ಮೂರು ತಿಂಗಳ ಹಿಂದೆ ಮಳೆಗಾಲದ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಕಚೇರಿಯ ಸಮೀಪ ಭೂಕುಸಿತದ ಅಪಾಯ ಎದುರಾಗಿತ್ತು. ಹಿರಿಯ ಭೂವಿಜ್ಞಾನಿಗಳು ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ವರದಿ ನೀಡಿದ್ದರು. ತಹಸೀಲ್ದಾರರು ಮತ್ತು ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಗಳು ಈ ಕಚೇರಿಯನ್ನು ರಕ್ಷಿತ ಕಟ್ಟಡ ಮತ್ತು ಗ್ರಾ.ಪಂ. ಸ್ವಾಮಿತ್ವದ ಕಟ್ಟಡಕ್ಕೆ ಸ್ಥಳಾಂತರಿಸುವAತೆ ಸೂಚಿಸಿದ್ದರು. ಕಚೇರಿಯನ್ನು ತಾತ್ಕಾಲಿಕವಾಗಿ ಕೊಡಾಣಿಯ ಗ್ರಾಮ ಪಂಚಾಯತ್ ಗೆ ಸ್ಥಳಾಂತರಿಸಲಾಗಿತ್ತು.

ಆದರೆ ಇನ್ನೂ ಕಟ್ಟಡಕ್ಕೆ ಸ್ಥಳಾಂತರವಾಗಿಲ್ಲ. ಈ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಯಾವುದೇ ಸ್ಥಳ ತಪಾಸಣೆ ನಡೆಸಿಲ್ಲ. ಕಟ್ಟಡ ಯೋಗ್ಯವಾಗಿಲ್ಲ ಎಂದು ತೀರ್ಮಾನವನ್ನು ಅಧಿಕೃತವಾಗಿ ನೀಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಲೂಕು ಆಡಳಿತಾಧಿಕಾರಿ ಎನ್.ಆರ್.ಹೆಗಡೆ ಜನರ ಮನವಿಗೆ ಸ್ಪಂದಿಸಿ ತಮ್ಮ ಕೈಲಾದ ಸಹಾಯ ಮಾಡುತ್ತೇನೆ. ಈ ವಿಚಾರವಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಜರೂರಾಗಿ ಸ್ಥಳ ಪರೀಶೀಲನೆ ಮಾಡಿ ವರದಿ ನೀಡುವಂತೆ ಒಂದು ಪತ್ರವನ್ನು ಕಳುಹಿಸಿದರು. ಬಳಿಕ ತಾ.ಪಂ.ಕಛೇರಿ ಎದುರಿನ ಪ್ರತಿಭಟನೆಯನ್ನು ಗ್ರಾಮಸ್ಥರು ನಿಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net