ಸೇತುವೆಗಾಗಿ ಅನಿರ್ದಿಷ್ಟ ಧರಣಿ ೧೧ರಿಂದ

ms patil naribol
Published on

ಕಲಬುರಗಿ: ಜೇವರ್ಗಿ ತಾಲೂಕಿನ ನರಿಬೋಳ ಮತ್ತು ಚಿತ್ತಾಪುರ ತಾಲೂಕಿನ ಚಾಮನೂರ ಮಧ್ಯೆ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಸೇತುವೆಯ ಅಪೂರ್ಣ ಕಾಮಗಾರಿ ಪೂರ್ಣಗೊಳಿಸಲು ಆಗ್ರಹಿಸಿ ಡಿ.೧೧ರಿಂದ ಹತ್ತಾರು ಗ್ರಾಮಸ್ಥರಿಂದ ಸೇತುವೆ ಮೇಲೆ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್.ಪಾಟೀಲ್ ತಿಳಿಸಿದರು.

೫೮ ಕೋಟಿ ರೂ. ವೆಚ್ಚದ ಸೇತುವೆಯ ಶೇ.೭೫ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಇನ್ನು ಮೂರು ಕಾಲಂ ನಿರ್ಮಾಣ ಏಳು ವರ್ಷದಿಂದ ಬಾಕಿ ಉಳಿದಿವೆ. ಈ ಬಗ್ಗೆ ಪ್ರಶ್ನಿಸಿದರೆ ಗುತ್ತಿಗೆದಾರ, ಉಪ ಗುತ್ತಿಗೆದಾರರ ಮಧ್ಯ ಹಣಕಾಸು ವಿಷಯದಲ್ಲಿ ಗೊಂದಲ ಎನ್ನುತ್ತಾರೆ. ಆದರೆ ಜನರ ಸಮಸ್ಯೆ ಯಾರೂ ಅರಿಯುತ್ತಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಸೇತುವೆಯು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ಕ್ಷೇತ್ರದ ಸಂಪರ್ಕ ಕೊಂಡಿಯಾಗಿದೆ. ಇಬ್ಬರು ಪ್ರಭಾವಿಗಳಾಗಿದ್ದು, ಏಳು ವರ್ಷದಿಂದ ಜನರ ನೋವು, ಬೇಡಿಕೆ ಅರಿತು ಸ್ಪಂದಿಸುವಲ್ಲಿ ವಿಫಲರಾಗಿದ್ದಾರೆ. ಸೇತುವೆ ಪೂರ್ಣಗೊಂಡರೆ ವಾಡಿ, ಶಹಾಬಾದ್‌ಗೆ ಕೇವಲ ೮ ಕಿ.ಮೀಟರ್ ಆಗಲಿದೆ. ವಾಡಿಯಿಂದ ಜೇವರ್ಗಿಗೆ ಬರುವ ವಾಹನಗಳಿಗೆ ೩೦, ೪೦ ಕಿ.ಮೀಟರ್ ದೂರ ಉಳಿತಾಯ ಆಗಲಿದೆ ಎಂದು ತಿಳಿಸಿದರು.

೨೦೦ಕ್ಕಿಂತ ಹೆಚ್ಚು ಗ್ರಾಮಕ್ಕೆ ಇದರಿಂದ ಅನುಕೂಲವಾಗುತ್ತದೆ. ವಾಡಿ ಸ್ಟೇಷನ್‌ನಿಂದ ಬೆಂಗಳೂರಿಗೆ ಹೋಗಲು ಪೂರಕವಾಗಲಿದೆ. ಈ ಸೇತುವೆ ಅಕ್ಕಪಕ್ಕ ಚಂದ್ರಲಾAಬಾ, ಕೂಡಲ ಸಂಗಮೇಶ್ವರ, ಪದ್ಮಾವತಿ, ಕಾಳಿಕಾಂಭ, ದತ್ತ ಪಾದುಕೆ, ಯನಗುಂಟಿ ಬೆಂಕಿತಾತ ಸೇರಿ ೫೦ಕ್ಕಿಂತ ಹೆಚ್ಚು ಪುಣ್ಯಕ್ಷೇತ್ರಗಳ ಸಂಪರ್ಕಕ್ಕೆ ಅನುಕೂಲವಾಗಲಿದೆ ಎಂದರು.

ಶರಣಗೌಡ ಪಾಟೀಲ್ ಚಾಮನೂರ, ಶರಣಗೌಡ ಪೊಲೀಸ್ ಪಾಟೀಲ್ ನರಿಬೋಳ, ರಾಘವೇಂದ್ರ ಕುಲ್ಕರ್ಣಿ, ಶುಭಾಶಯಗೌಡ ಯನಗುಂಟಿ, ಗುರುರಾಜ ಟಣಕೇದಾರ, ಸಿದ್ದು ಕಂದಗಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net