ಗ್ರಾಮಾಡಳಿತ ಅಧಿಕಾರಿಗಳಿಂದ ಮುಷ್ಕರ

protest
Published on

ದೊಡ್ಡಬಳ್ಳಾಪುರ: ಸರ್ಕಾರ ಗ್ರಾಮಾಡಳಿತ ಅಧಿಕಾರಿಗಳ ಬೇಡಿಕೆ ಈಡೇರಿಸದ ಕಾರಣದಿಂದಾಗಿ ತಾಲೂಕು ಕಚೇರಿ ಮುಂಭಾಗ ಗ್ರಾಮ ಆಡಳಿತ ಅಧಿಕಾರಿಗಳ ಸಂಘದಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಾಗಿದೆ.

ಜಿಲ್ಲಾ ಕಂದಾಯ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ರಾಜಶೇಖರ್ ಮಾತನಾಡಿ, ಈ ಹಿಂದೆ ಧರಣಿ ನಡೆಸಿದಾಗ ಗ್ರಾಮಾಡಳಿತ ಅಧಿಕಾರಿಗಳ ಎಲ್ಲ ಬೇಡಿಕೆ ಈಡೇರಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ ಈವರೆಗೆ ಯಾವುದೇ ಬೇಡಿಕೆ ಈಡೇರಿಸಲು ಮುಂದಾಗಿಲ್ಲ. ಬದಲಿಗೆ ಕೆಲಸದ ಒತ್ತಡ ಹೆಚ್ಚಿಸಲಾಗಿದೆ ಎಂದು ಆರೋಪಿಸಿದರು.

ದಿನದಿಂದ ದಿನಕ್ಕೆ ಕೆಲಸದ ಒತ್ತಡ ಹೆಚ್ಚಾಗಿದೆ. ಕಚೇರಿ, ಮೂಲಸೌಕರ್ಯವಿಲ್ಲದೆ ಸಮಸ್ಯೆಗಳ ಸುಳಿಯಲ್ಲಿ ಕೆಲಸ ಮಾಡಬೇಕಿದೆ. ಹೆಚ್ಚುವರಿ ಪರಿಹಾರ, ಸೌಲಭ್ಯಗಳಿಲ್ಲದೇ ವರ್ಷಪೂರ್ತಿ ಕೆಲಸ ಮಾಡುವ ಅನಿವಾರ್ಯವಿದೆ ಎಂದು ದೂರಿದರು.

ಗ್ರಾಮಾಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷ ಶ್ರೀಮಂತ ಅಸಂಗ್ಯಾಳ ಮಾತನಾಡಿ, ಇ-ಪಾವತಿ ಖಾತಾ ಕೈಬಿಡಬೇಕು. ಸುಸಜ್ಜಿತ ಕಚೇರಿ, ಲ್ಯಾಪ್‌ಟಾಪ್, ಇಂಟರ್‌ನೆಟ್, ಪ್ರಿಂಟರ್, ಸ್ಕ್ಯಾನರ್ ಸೇರಿ ಮೂಲ ಸೌಕರ್ಯ ನೀಡಬೇಕು. ಮೃತರ ಕುಟುಂಬಕ್ಕೆ ರೂ.50 ಲಕ್ಷ ಪರಿಹಾರ ನೀಡಬೇಕು. ವರ್ಷಪೂರ್ತಿ ಕೆಲಸ ಮಾಡುವ ಆಡಳಿತ ಅಧಿಕಾರಿಗಳಿಗೆ ಒಂದು ತಿಂಗಳ ವೇತನ ಹೆಚ್ಚುವರಿಯಾಗಿ ನೀಡಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ತಹಸೀಲ್ದಾರ್ ವಿಭಾವಿದ್ಯಾ ರಾಠೋಡ್ ಗ್ರಾಮಾಡಳಿತ ಅಧಿಕಾರಿಗಳ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳಿಗೆ ರವಾನೆ ಮಾಡಿ ಖುದ್ದು ಸಮಸ್ಯೆ ತಿಳಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net