ಶಿರಸಿಯಲ್ಲಿ ಗುಂಡಿ ಗಂಡಾಂತರ ಸಾರ್ವಜನಿಕರ ಪ್ರತಿಭಟನೆ

sirsi strike
Published on
ಶಿರಸಿ:   ಪ್ರತಿದಿನ ಸಾರ್ವಜನಿಕರು ರಸ್ತೆಯಲ್ಲಿನ ಗುಂಡಿಯಲ್ಲಿ ಬಿದ್ದು ಗಂಭೀರವಾಗಿ ಗಾಯಗೊಳ್ಳುತ್ತಿದ್ದಾರೆ. ಅಮಾಯಕರು ಪ್ರಾಣಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಬಸ್ ಗಳು ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿವೆ. ಪದೇ ಪದೇ ಬಸ್ ಅಪಘಾತಗಳು ಸಂಭವಿಸುತ್ತಿದ್ದರ ಹಿನ್ನಲೆಯಲ್ಲಿ ಗುರುವಾರ ಸುಮಾರು 250 ಕ್ಕೂ ಅಧಿಕ ಸಾರ್ವಜನಿಕರು ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಪಾದಯಾತ್ರೆ ಮೂಲಕ ಶ್ರೀ ಮಾರಿಕಾಂಬಾ ದೇವಾಲಯದಿಂದ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಅನಂತಮೂರ್ತಿ ಹೆಗಡೆ,
ನಗರ ಮತ್ತು ಗ್ರಾಮಾಂತರ ಭಾಗದಲ್ಲಿ ರಸ್ತೆ ಗುಂಡಿ ಮುಚ್ಚಲಾಗುತ್ತಿಲ್ಲ. ಬಸ್ ಸಮಸ್ಯೆ, ಮಳೆ ಮಾಪನ ಯಂತ್ರ ದುರಸ್ತಿ ಸೇರಿದಂತೆ ಜನರ ಮೂಲಭೂತ ಸೌಕರ್ಯ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಹಮ್ಮಿಕೊಂಡ ಪಾದಯಾತ್ರೆ ಹಾಗೂ ಪ್ರತಿಭಟನಾ ಧರಣಿ ನಡೆಸುತ್ತಿದ್ದೇವೆ. ನಾವೆಲ್ಲರೂ ಸಾರ್ವಜನಿಕರ ಪರವಾಗಿ ಬೀದಿಗಿಳಿದು  ಹೋರಾಟ ಮಾಡುತ್ತಿದ್ದೇವೆ.  ಇದು ಯಾರೊಬ್ಬರ ಹೋರಾಟ ಅಲ್ಲ, ಯಾವ ಪಕ್ಷದ ಹೋರಾಟವಲ್ಲ, ಇದು ಜನರ ಪರವಾದ ಹೋರಾಟವಾಗಿದೆ. ದಿನ ದಿನವೂ ನಗರದಲ್ಲಿ  ರಸ್ತೆ ಗುಂಡಿಗಳಿಂದ ಅಪಾಯವಾಗುವ ಪ್ರಕರಣಗಳು ದಾಖಲಾಗುತ್ತಲೇ ಇವೆ. ಇನ್ನು ಎಷ್ಟು ಜನ ಪ್ರಾಣವನ್ನು ಕಳೆದುಕೊಳ್ಳಬೇಕು. ಶಿರಸಿಯಲ್ಲಿ ಸುಮಾರು 1,500 ಕಿ.ಮೀ ಗ್ರಾಮೀಣಾಭಿವೃದ್ಧಿ ರಸ್ತೆಗಳಿವೆ. ಎಲ್ಲಿಯೂ ಕೂಡ ಗುಂಡಿ ಮುಚ್ಚುವಂತಹ ಕೆಲಸ  ಆಗಿಲ್ಲ.  ಶಾಸಕರು ಈ ಭಾಗದ ಪ್ರಥಮ ಪ್ರಜೆ ಆಗಿದ್ದಾರೆ. ಈ ಕ್ಷೇತ್ರಕ್ಕೆ ಬರುವ  ಎಲ್ಲ ಅನುದಾನವೂ ಅವರ ಆಜ್ಞೆಯಂತೆಯೇ ಬರುತ್ತದೆ.  ಅವರು ಕಾಳಜಿ ವಹಿಸಬೇಕು ಎಂದು ಆಗ್ರಹಿಸಿದರು.
 ಬಸ್ಸುಗಳು ರಸ್ತೆ ಮಧ್ಯದಲ್ಲಿಯೇ ಕೆಟ್ಟು ನಿಲ್ಲುತ್ತವೆ. ಕೆಟ್ಟು ನಿಂತ ಬಸ್ಸುಗಳಿಗೆ ಪರ್ಯಾಯ ವ್ಯವಸ್ಥೆ ಇಲ್ಲ. ಸರಿಯಾದ ನಿರ್ವಹಣೆಯೇ ಇಲ್ಲ. ಸರ್ಕಾರದ ತೆರಿಗೆ ಹಣದಿಂದ ಆಡಳಿತ ನಡೆಸುತ್ತಿದ್ದೀರಿ, ಈ ರೀತಿ ಅವ್ಯವಸ್ಥೆ ಆಗುತ್ತಿದ್ದರೂ ಪರಿಹರಿಸದೆ ಇರುವ ನಿಮಗೆ ಮಾನವೀಯತೆ ಇಲ್ಲವೇ ? ಎಂದು ಪ್ರಶ್ನಿಸಿದರು.
ಬಿಜೆಪಿ ಗ್ರಾಮೀಣ ಮಂಡಳ ಅಧ್ಯಕ್ಷೆ ಉಷಾ ಹೆಗಡೆ ಮಾತನಾಡಿ, ಶಿರಸಿ ತಾಲೂಕಿನಲ್ಲಿ  ಗ್ರಾಮೀಣ ಹಾಗೂ ನಗರದ ರಸ್ತೆಗಳು ಓಡಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ದಿನದಿಂದ ದಿನಕ್ಕೆ ಈ ರಸ್ತೆಯಲ್ಲಿ ಬೀಳುವವವರ ಸಂಖ್ಯೆ ಹಾಗೂ ಅಪಘಾತವಾಗುವವರ ಸಂಖ್ಯೆ ಹೆಚ್ಚಾಗಿದೆ. ಇದನೆಲ್ಲ ನೋಡಿ ಕಂಡು ಕಾಣದೆ ಇರುವ ಸರ್ಕಾರ ಸಾರ್ವಜನಿಕ ಹಿತಾಶಕ್ತಿಯಿಂದ ಹೊಂಡಗಳನ್ನು ಮುಚ್ಚುವ ಕೆಲಸವನ್ನು ಮಾಡಬೇಕು ಹಾಗೂ ಕೆಎಸ್ ಆರ್ ಟಿಸಿ ಬಸ್ ಗಳನ್ನೂ ಸರಿಯಾದ ಸಮಯಕ್ಕೆ ಬಿಡುವ ಮತ್ತು ಸರಿಯಾಗಿ ನಿರ್ವಹಣೆ ಮಾಡುವ ಕೆಲಸವನ್ನು ಮಾಡಬೇಕು. ಬೆಲೆ ವಿಮೆ ರೈತರಿಗೆ ಸರಿಯಾಗಿ ಸಿಗುಲು ಮಳೆಮಾಪನ ಯಂತ್ರವನ್ನು ಸರಿಪಡಿಸಬೇಕು ಎಂದರು.
ಬಿಜೆಪಿಯ ಜಿಲ್ಲಾ ರೈತಮೋರ್ಚಾ ಅಧ್ಯಕ್ಷ ರಮೇಶ ನಾಯ್ಕ ಕುಪ್ಪಳ್ಳಿ,ನಗರ ಮಂಡಲ ಪ್ರದಾನ ಕಾರ್ಯದರ್ಶಿ ಮಹಾಂತೇಶ್ ಹಾದಿಮನಿ
ಸಾಮಾಜಿಕ ಮುಖಂಡ ರಾಮು ಕಿಣಿ, ಹುತ್ಗಾರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ನಾಯ್ಕ ,ಹಿರಿಯ ಹೋರಾಟಗಾರ ಜಯಶೀಲ ಗೌಡರ್, ಮಂಜುನಾಥ ಪಾಟೀಲ್ ದಾಸನಕೊಪ್ಪ ಇತರರಿದ್ದರು. ತಹಸೀಲ್ದಾರ್ ಪಟ್ಟರಾಜ ಗೌಡ ಮನವಿ ಸ್ವೀಕರಿಸಿದರು.
ಪಾದಯಾತ್ರೆಗೆ ಚಾಲನೆ ನೀಡುವ ಮುನ್ನ ಮಾರಿಕಾಂಬಾ ಸನ್ನಿಧಿಯಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ನಂತರದಲ್ಲಿ ನಗರದ ಶಿವಾಜಿ ಛಕದಲ್ಲಿನ ಛತ್ರಪತಿ ಶಿವಾಜಿ ಮಹಾರಾಜ ಪುತ್ಥಳಿಗೆ ಹಾಗು ಮಾರುಕಟ್ಟೆ ಆವಾರದಲ್ಲಿರುವ ಮಹಾತ್ಮ ಗಾಂಧೀಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net