ರಸ್ತೆ ಸುರಕ್ಷತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ

18 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಸಾರ್ವಜನಿಕರು ವಾಹನ ಚಾಲಾಯಿಸುವಾಗ ರಸ್ತೆ ಸುರಕ್ಷತೆ ನಿಯಮಗಳನ್ನು ಪಾಲಿಸಿದರೆ ಅಪಘಾತ ತಡೆಯಬಹುದು. ಚಾಲಕರು ತಮ್ಮ ಹಾಗೂ ಸಹ ಸವಾರರ ಸುರಕ್ಷತೆ ಬಗ್ಗೆ ಕಾಳಜಿ ವಹಿಸಿ ವಾಹನ ಚಲಾಯಿಸಬೇಕು ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ ಹೇಳಿದರು.

ಜಿಲ್ಲಾಡಳಿತ, ಸಾರಿಗೆ ಇಲಾಖೆ, ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಸಹಯೋಗದಲ್ಲಿ ಕೆಸಿಡಿ ವೃತ್ತದಿಂದ ಏರ್ಪಡಿಸಿದ್ದ ಕಾಲ್ನಡಿಗೆ (ವಾಕ್​ಥಾನ್​) ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಗರದಲ್ಲಿ ಬೇರೆ ರೀತಿಯಾದ ಸನ್ನಿವೇಶ ಹಾಗೂ ಪ್ರಕರಣಗಳಲ್ಲಿ ಸಂಭವಿಸುವ ಸಾವಿಗಿಂತ ಅಪಘಾತದಿಂದ ಮೃತಪಡುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ರಸ್ತೆ ನಿಯಮ ಪಾಲಿಸಿ ಅಪಘಾತಗಳನ್ನು ತಪ್ಪಿಸಲು ಇಲಾಖೆಗಳೊಂದಿಗೆ ಕೈ ಜೋಡಿಸಬೇಕು ಎಂದರು.

ಕವಿವಿ ಕುಲಸಚಿವ ಡಾ. ಎ. ಚನ್ನಪ್ಪ ಮಾತನಾಡಿ, ಜನರಲ್ಲಿ ರಸ್ತೆ ಸುರಕ್ಷತೆ ಬಗ್ಗೆ ತಿಳಿವಳಿಕೆ ಮೂಡಿಸುವುದೇ ಕಾರ್ಯಕ್ರಮದ ಉದ್ದೇಶ. ಪಾಲಕರು ಮಕ್ಕಳಿಗೆ ಅಪ್ರಾಪ್ತ ವಯಸ್ಸಿನಲ್ಲಿ ವಾಹನ ಚಾಲನೆಗೆ ಪ್ರಚೋದನೆ ನೀಡಿದಲ್ಲಿ ಅಪಘಾತಗಳ ಸಂಭವ ಹೆಚ್ಚು. ರಸ್ತೆ ನಿಯಮ ಪಾಲಿಸಿ ಅಪಘಾತ ತಡೆಯಬೇಕು ಎಂದರು.

ಉಪವಿಭಾಗಾಧಿಕಾರಿ ಶಾಲಂ ಹುಸೇನ್​, ಉಪಸಾರಿಗೆ ಆಯುಕ್ತ ನೂರ್​ ಮೊಹಮ್ಮದ್​ ಬಾಷಾ, ಕೆಸಿಡಿ ಪ್ರಾಚಾರ್ಯ ಡಾ. ಡಿ.ಬಿ ಕರಡೋಣಿ, ಡಾ. ಎಂ.ಬಿ ದಳಪತಿ, ಪ್ರಾದೇಶಿಕ ಸಾರಿಗೆ ಕಚೇರಿಯ ಎಸ್​.ಡಿ. ಬೆಲ್ಲದ, ಆರ್​.ಎಸ್​. ಮಾಳಗಿ, ಮಹೇಶ ಮಠಪತಿ, ಸಂಜೀವ್​ ಹೊಂಡೇದ್​, ಸಚಿನ್​ ಹುಲಕೋಟಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net