

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಗೋ ಹತ್ಯೆ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಹಾಗೂ ಅಕ್ರಮ ಗೋ ಸಾಗಾಟವನ್ನು ತಡೆಗಟ್ಟಬೇಕೆಂದು ವಿಶ್ವಹಿಂದು ಪರಿಷತ್ ಹುಬ್ಬಳ್ಳಿ ಮಹಾನಗರ ಜಿಲ್ಲಾ ಆಗ್ರಹಿಸಿದೆ.
ಈ ಕುರಿತು ಪರಿಷತ್ನ ಪದಾಧಿಕಾರಿಗಳು, ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಕರ್ನಾಟಕದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ 2020 ಮತ್ತು ಕರ್ನಾಟಕ ಪ್ರಾಣಿ ಬಲಿ ನಿಷೇಧ ಕಾಯ್ದೆ 1959 ಜಾರಿಯಲ್ಲಿದ್ದು, ಅವುಗಳ ಪ್ರಕಾರ ಯಾವುದೇ ವಯಸ್ಸಿನ ದನ, ಎತ್ತು, ಹೋರಿ, ಕರುಗಳ ಬಲಿ, ಹತ್ಯೆ, ಕುರ್ಬಾನಿ ನಿಷೇಧಿಸಲಾಗಿದೆ. ಜೂ. 15, 16 ಹಾಗೂ 17ರಂದು ಕುರ್ಬಾನಿ ಇದ್ದು, ಈ ದಿನಗಳನ್ನು ಗೋ ಹತ್ಯೆ ಹಾಗೂ ಗೋ ಅಕ್ರಮ ಸಾಗಾಟವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮನೆ-ಬೀದಿಗಳಿಂದ ಗೋವುಗಳು ಕಳ್ಳತನವಾಗದಂತೆ ಅಹೋರಾತ್ರಿ ಗಸ್ತು ಹಾಗೂ ನಾಕಾಬಂದಿ ಹಾಕಬೇಕು. ಜೂ. 18ರ ತನಕ ಯಾರೂ ಕೂಡ ಖಾಲಿ ಜಾಗದಲ್ಲಿ ಅಥವಾ ಮನೆಯ ಅಂಗಳದಲ್ಲಿ ಗೋವುಗಳನ್ನು ತಂದು ಕಟ್ಟಿ ಹಾಕದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ. ಕುರ್ಬಾನಿ ನಿಷೇಧವಿರುವ ಬಗ್ಗೆ ಧ್ವನಿ ವರ್ಧಕದಲ್ಲಿ ಜಾಗೃತಿ ಮೂಡಿಸಬೇಕು. ಗೋ ಹತ್ಯೆ, ಬಲಿ, ಕುರ್ಬಾನಿಯನ್ನು ಯಾವುದೇ ಕಾರಣಕ್ಕೂ ಹಿಂದು ಸಮಾಜ ಸಹಿಸುವುದಿಲ್ಲ. ಹಿಂದು ಧಾರ್ವಿುಕ ಭಾವನೆಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ವಿಎಚ್ಪಿ ಹುಬ್ಬಳ್ಳಿ ಮಹಾನಗರ ಜಿಲ್ಲಾಧ್ಯಕ್ಷ ಸಂಜೀವ ಬಡಸ್ಕರ, ಕಾರ್ಯದರ್ಶಿ ರಮೇಶ ಕದಂ, ಬಜರಂಗ ದಳ ಧಾರವಾಡ ವಿಭಾಗ ಸಂಚಾಲಕ ಶಿವಾನಂದ ಸತ್ತಿಗೇರಿ, ವಿಜಯ ಕ್ಷೀರಸಾಗರ, ಮಲ್ಲಿಕಾರ್ಜುನ ಸತ್ತಿಗೇರಿ, ಚೇತನ ರಾವ್, ಇತರರು ಇದ್ದರು.