

ಪಡುಬಿದ್ರಿ: ಅನ್ಯ ರಾಜ್ಯಗಳ ಮೀನು ಸಾಗಾಟದ ವಾಹನಗಳು ಮಂಗಳೂರು ನಗರ ಪ್ರವೇಶಿಸದಂತೆ ದಕ್ಷಿಣಕನ್ನಡ ಜಿಲ್ಲಾಡಳಿತ ನಿರ್ಬಂಧ ಹೇರಿರುವ ಪರಿಣಾಮ ಹೆಜಮಾಡಿ ಗಡಿಯಲ್ಲಿ ಮಂಗಳವಾರವೂ ಕಟ್ಟುನಿಟ್ಟಿನ ತಪಾಸಣೆ ನಡೆಸಿ ಹಿಂದಕ್ಕೆ ಕಳುಹಿಸಲಾಯಿತು. ಕಟ್ಟುನಿಟ್ಟಿನ ತಪಾಸಣೆಯಿಂದ ಇತರ ವಾಹನಗಳ ದಟ್ಟಣೆಗೂ ಕಾರಣವಾಗಿತ್ತು.
ಗಡಿಯಲ್ಲಿ ತಪಾಸಣೆ ನಡೆಸಿದ ಪೊಲೀಸರು ಕೇರಳ ಸಹಿತ ಕರ್ನಾಟಕದ ಇತರ ಜಿಲ್ಲೆಗಳಿಗೆ ಸಾಗುವ ಲಾರಿಗಳ ಸ್ಪಷ್ಟ ಮಾಹಿತಿ ಪಡೆದು ಸಂಚರಿಸಲು ಅವಕಾಶ ಕಲ್ಪಿಸಿದರು. ಸೋಮವಾರ ಸಂಜೆ ಮೀನು ಲಾರಿ ಸಂಚಾರ ನಿರ್ಬಂಧದಿಂದ ಕೇರಳಕ್ಕೆ ಸಾಗುವ 50ಕ್ಕೂ ಅಧಿಕ ಲಾರಿಗಳು ಹೆಜಮಾಡಿಯಲ್ಲಿ ನಿಲುಗಡೆಗೊಂಡು ಸಮಸ್ಯೆಯಾಗಿತ್ತು. ರಾತ್ರಿ 12.30ರ ಬಳಿಕ ಕೇವಲ ಕೇರಳಕ್ಕೆ ಸಾಗುವ ಲಾರಿಗಳಿಗೆ ಸಂಚಾರಕ್ಕೆ ಅವಕಾಶ ನೀಡಿದ ಪರಿಣಾಮ ಸಮಸ್ಯೆ ಬಗೆಹರಿದಿತ್ತು.
ಗ್ರಾಮೀಣ ಪ್ರದೇಶದಲ್ಲಿ ತುರ್ತು ನಿರ್ಮಾಣ ಕಾಮಗಾರಿಗಳಿಗೆ ಲಾಕ್‌ಡೌನ್ ವಿನಾಯಿತಿ ಪರಿಣಾಮ ಜಲ್ಲಿ ಕ್ರಷರ್ ಹಾಗೂ ಗಣಿಗಾರಿಕೆ ಆರಂಭವಾಗಿದೆ. ಹಾರ್ಡ್‌ವೇರ್, ಸಿಮೆಂಟ್ ಮಳಿಗೆಗಳೂ ಬೆಳಗ್ಗಿನ ವೇಳೆ ತೆರೆದು ವಹಿವಾಟು ಆರಂಭಿಸಿವೆ.
ಉತ್ತರ ಕರ್ನಾಟಕ ಮೂಲದ ವಲಸೆ ಕಾರ್ಮಿಕರು ತವರು ಜಿಲ್ಲೆಗಳಿಗೆ ಹೊರಡಲು ಉತ್ಸುಕರಾಗಿದ್ದು, ಕಾಪು ತಾಲೂಕಿನಲ್ಲಿ ಸೋಮವಾರದವರೆಗೆ 1,100 ಜನರ ಪಟ್ಟಿಯನ್ನು ಕಂದಾಯ ಇಲಾಖೆ ಸಿದ್ಧಪಡಿಸಿ ಕುಂದಾಪುರ ಉಪವಿಭಾಗಾಧಿಕಾರಿಗೆ ರವಾನಿಸಿದೆ.