ಸುಳ್ಳು ಜಾತಿ ಸರ್ಟಿಫಿಕೆಟ್ ಕಾಯ್ದೆ ತಿದ್ದುಪಡಿಗೆ ಸಿದ್ಧ; ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ

KALAPA
Published on

ಬೆಂಗಳೂರು: ಸುಳ್ಳು ಜಾತಿ ಪ್ರಮಾಣ ಪತ್ರ ನೀಡುವ ಅಧಿಕಾರಿಗಳ ವಿರುದ್ಧ ಸಮಾಜ ಕಲ್ಯಾಣ ಇಲಾಖೆಯಿಂದಲೇ ಶಿಸ್ತು ಕ್ರಮ ಕೈಗೊಳ್ಳುವ ಕುರಿತು ಕಾನೂನು ತಿದ್ದುಪಡಿ ತರಲು ಸಿದ್ಧ ಎಂದು ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ಹೇಳಿದರು.

ವಿಧಾನಸಭೆಯಲ್ಲಿ ಬಿಎಸ್​ಪಿಯ ಎನ್.ಮಹೇಶ್ ಪ್ರಶ್ನೆ ಮೇಲಿನ ಚರ್ಚೆಯಲ್ಲಿ ಸಚಿವರು ಈ ಉತ್ತರ ನೀಡಿದರು. ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿರುವ ಆರೋಪಕ್ಕೆ ಗುರಿಯಾಗಿರುವ 27 ತಹಸೀಲ್ದಾರ್​ಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಕಂದಾಯ ಇಲಾಖೆಗೆ ಶಿಫಾರಸು ಮಾಡಲಾಗಿದೆ. ಕಂದಾಯ ಇಲಾಖೆಯವರೂ ಈಗಾಗಲೇ ಸಂಬಂಧಪಟ್ಟವರಿಗೆ ಷೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ ಎಂದರು.

ಆಗ ಜೆಡಿಎಸ್​ನ ಎ.ಟಿ.ರಾಮಸ್ವಾಮಿ, ಡಾ.ಅನ್ನದಾನಿ, ಎಚ್.ಕೆ.ಕುಮಾರಸ್ವಾಮಿ, ಕಾಂಗ್ರೆಸ್​ನ ಪಿ.ಟಿ.ಪರಮೇಶ್ವರ್ ನಾಯಕ್, ಪ್ರಿಯಾಂಕ್ ಖರ್ಗೆ ಮೊದಲಾದವರು ತಪ್ಪಿತಸ್ಥರ ವಿರುದ್ಧ ಕಂದಾಯ ಇಲಾಖೆಗೆ ಪತ್ರ ಬರೆದರೆ ಸಾಲದು. ನೀವೇ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವಂತಾಗಬೇಕು ಎಂದು ಆಗ್ರಹಿಸಿದಾಗ, ಸದನ ಒಪ್ಪಿದರೆ ಕಾಯ್ದೆಗೆ ತಿದ್ದುಪಡಿ ತರಲು ಸಿದ್ಧ ಎಂದು ಕಾರಜೋಳ ಹೇಳಿದರು.

ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ್ದಾರೆಂಬ ಆರೋಪಕ್ಕೆ ಗುರಿಯಾಗಿರುವ ಗೋಕಾಕ್ ತಹಸೀಲ್ದಾರ್ ಸಸ್ಪೆಂಡ್ ಮಾಡಲಾಗಿದೆ. ಅಧೀನ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ ಎಂದ ಡಿಸಿಎಂ, ಸುಳ್ಳು ಪ್ರಮಾಣ ಪತ್ರ ಕೊಟ್ಟವರು ಮತ್ತು ತೆಗೆದುಕೊಂಡ ಇಬ್ಬರ ಮೇಲೂ ಕ್ರಿಮಿನಲ್ ಕೇಸ್ ದಾಖಲಿಸಲು ಕಾನೂನಿನಲ್ಲಿ ಅವಕಾಶವಿದೆ. ಇಂತಹದ್ದೇ ಪ್ರಕರಣದಲ್ಲಿ ಐವರಿಗೆ ಶಿಕ್ಷೆಯಾಗಿದೆ.

ಶಾಸಕರಾಗಿದ್ದ ಕೊತ್ತನೂರು ಮಂಜುನಾಥ್ ಮೇಲೂ ಪ್ರಕರಣ ದಾಖಲಾಗಿತ್ತು. ಅವರು ಸುಪ್ರಿಂಕೋರ್ಟ್​ಗೆ ಹೋಗಿ ತಡೆಯಾಜ್ಞೆ ತಂದಿದ್ದಾರೆ ಎಂದು ವಿವರಿಸಿದರು. ರಾಜ್ಯದಲ್ಲಿ ಈವರೆಗೆ 973 ನಕಲಿ ಜಾತಿ ಪ್ರಮಾಣ ಪತ್ರ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 610 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. 12 ಪ್ರಕರಣಗಳಲ್ಲಿ ಸಂಬಂಧಪಟ್ಟವರ ವಿರುದ್ಧ ಶಿಕ್ಷೆ ವಿಧಿಸಲಾಗಿದೆ. ಚುನಾವಣೆಗಳಲ್ಲಿ ಸ್ಪರ್ಧಿಸಲು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿರುವ ಸಂಬಂಧ 68 ಪ್ರಕರಣಗಳು ದಾಖಲಾಗಿದ್ದು, ಐವರಿಗೆ ಶಿಕ್ಷೆಯಾಗಿದೆ. ಇದರ ವಿರುದ್ಧ ಕೆಲವರು ನ್ಯಾಯಾಲಯ ಮೊರೆ ಹೋಗಿದ್ದಾರೆ ಎಂದು ಗಮನಕ್ಕೆ ತಂದರು.

ಕಾನೂನಿಗಿಂತ ಮನಃಪರಿವರ್ತನೆ ಮುಖ್ಯ

ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಲಾಗಿದ್ದು, ಮುಂದುವರಿದ ಸಮಾಜದವರು ಈ ಮೀಸಲಾತಿ ದುರ್ಬಳಕೆ ಮಾಡಿಕೊಳ್ಳಬಾರದು. ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುವುದರ ವಿರುದ್ಧ ಎಷ್ಟೇ ಕಠಿಣವಾದ ಕಾನೂನು ತಂದರೂ ಪ್ರಯೋಜನವಾಗುವುದಿಲ್ಲ. ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುವವರ ಮನಃಸ್ಥಿತಿ ಬದಲಾಗಬೇಕಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net