

ಬಂಟ್ವಾಳ: ಬಿ.ಸಿ.ರೋಡಿನ ರಾಷ್ಟ್ರೀಯ ಹೆದ್ದಾರಿ ಪಕ್ಕವೇ ವಾಹನ ಪಾರ್ಕಿಂಗ್ ಮಾಡಿ ಇತರ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟು ಮಾಡುತ್ತಿದ್ದ ಹಾಗೂ ರಸ್ತೆಬದಿ ಎಲ್ಲೆಂದರಲ್ಲಿ ವಾಹನ ಪಾರ್ಕ್ ಮಾಡುತಿದ್ದ ವಾಹನ ಚಾಲಕರ ವಿರುದ್ಧ ಬಂಟ್ವಾಳ ಸಂಚಾರಿ ಪೊಲೀಸರು ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿದ್ದಾರೆ.
ಬಿ.ಸಿ.ರೋಡ್ ಸೋಮಯಾಜಿ ಆಸ್ಪತ್ರೆ ಮುಂಭಾಗದ ರಾಷ್ಟ್ರೀಯ ಹೆದ್ದಾರಿ ಬದಿ ಪ್ರತಿ ದಿನ ಸರತಿಯಲ್ಲಿ ವಾಹನಗಳ ಪಾರ್ಕಿಂಗ್ ಕಂಡು ಬರುತ್ತಿತ್ತು. ಆಸ್ಪತ್ರೆ ಸೇರಿದಂತೆ ನಗರದಲ್ಲಿ ಬೇರೆ ಬೇರೆ ಕೆಲಸಗಳಿಗೆ ಬರುವವರು ರಾಷ್ಟ್ರೀಯ ಹೆದ್ದಾರಿ ಬದಿ ವಾಹನ ನಿಲ್ಲಿಸ ತೆರಳುತ್ತಿದ್ದರು. ಇದು ಟ್ರಾಫಿಕ್ ಪೊಲೀಸರಿಗೂ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಹೆದ್ದಾರಿ ಬದಿ ವಾಹನ ನಿಲ್ಲಿಸಬಾರದು ಎನ್ನುವ ಸೂಚನಾ ಫಲಕವನ್ನು ಸಂಚಾರಿ ಪೊಲೀಸರು ಅಳವಡಿಸಿದ್ದರೂ ಸೋಮವಾರ ಕೆಲವು ವಾಹನಗಳು ಈ ಸೂಚನಾ ಫಲಕದ ಮುಂಭಾಗವೇ ವಾಹನ ನಿಲ್ಲಿಸಿ ಹೋಗಿದ್ದು ಪೊಲೀಸರು ವಾಹನಗಳ ಚಕ್ರಕ್ಕೆ ಲಾಕ್ ಅಳವಡಿಸಿ ಚಾಲಕರಿಗೆ ಎಚ್ಚರಿಕೆ ನೀಡಿದ್ದಾರೆ. ಮಂಗಳವಾರ ಈ ಸ್ಥಳದಲ್ಲಿ ವಾಹನಗಳ ಪಾರ್ಕಿಂಗ್ ಇಲ್ಲದೆ ರಾಷ್ಟ್ರೀಯ ಹೆದ್ದಾರಿ ಬದಿ ಪಾರ್ಕಿಂಗ್ ಮುಕ್ತವಾಗಿತ್ತು.