ಕಟ್ಟುನಿಟ್ಟಾಗಿ ನೀತಿ ಸಂಹಿತೆ ಪಾಲಿಸಿ - ಡಿಸಿ ಹಿರೇಮಠ

DC New
Published on

ಬೆಳಗಾವಿ: ಲೋಕಸಭಾ ಉಪಚುನಾವಣೆಗೆ ಏ. 17ರಂದು ದಿನಾಂಕ ಘೋಷಣೆಯಾದ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ನೀತಿಸಂಹಿತೆ ಜಾರಿಗೆ ಬಂದಿದ್ದು, ಚುನಾವಣಾ ಆಯೋಗದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಜಿಲ್ಲೆಯ ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಅಧಿಕಾರಿಗಳ ಜತೆ ಜರುಗಿದ ತುರ್ತು ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು, ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಎಲ್ಲ ರೀತಿಯ ತಂಡ ರಚಿಸಲಾಗಿದ್ದು, ತರಬೇತಿ ಕೂಡ ನೀಡಲಾಗಿದೆ. ಇದೀಗ ಉಪ ಚುನಾವಣೆ ಘೋಷಣೆಯಾಗಿದ್ದು, ನೀತಿಸಂಹಿತೆ ಪಾಲನೆ ಸೇರಿದಂತೆ ರಚಿಸಿರುವ ಎಲ್ಲ ತಂಡಗಳು ಸಕ್ರಿಯವಾಗಿ ಕಾರ್ಯಾರಂಭಿಸಬೇಕು ಎಂದು ತಿಳಿಸಿದರು.

ಜಿಪಂ ಸಿಇಒ ಎಚ್.ವಿ.ದರ್ಶನ ಮಾತನಾಡಿ, 80 ವರ್ಷ ಮೇಲ್ಪಟ್ಟವರು, ಕೋವಿಡ್ ಸೋಂಕಿತರು ಹಾಗೂ ಅಂಗವಿಕಲರಿಗೆ ಪೋಸ್ಟಲ್ ಬ್ಯಾಲೆಟ್ (ಅಂಚೆ ಮತಪತ್ರ) ಒದಗಿಸಲಾಗುವುದು. ಮುಂದಿನ 24 ಗಂಟೆಯಲ್ಲಿ ಸರ್ಕಾರದ ಸಾಧನೆ ಬಿಂಬಿಸುವಂತಹ ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸಬೇಕು ಎಂದು ಸೂಚನೆ ನೀಡಿದರು. ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಮಹಾನಗರ ಪಾಲಿಕೆಯ ಆಯುಕ್ತ ಜಗದೀಶ ಕೆ.ಎಚ್., ಉಪ ವಿಭಾಗಾಧಿಕಾರಿ ಅಶೋಕ ತೇಲಿ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಜಂಟಿ ನಿರ್ದೇಶಕ ಚನ್ನಬಸಪ್ಪ ಕೊಡ್ಲಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net