ಆಹಾರ ಗುಣಮಟ್ಟ ಸುರಕ್ಷತೆ ಕುರಿತು ಕಠಿಣ

15
Published on

ಮೈಸೂರು: ಆರೋಗ್ಯಕರ ಹಾಗೂ ಗುಣಮಟ್ಟದ ಆಹಾರ ಪೂರೈಕೆ ನಮ್ಮ ಜವಾಬ್ದಾರಿಯಾಗಿದೆ. ಫುಟ್‌ಪಾತ್ ಆಹಾರ ಗುಣಮಟ್ಟ ಸುರಕ್ಷತೆ ಕುರಿತು ಕಠಿಣ ಕ್ರಮದ ಅಗತ್ಯ ಇದೆ ಎಂದು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಹೇಳಿದರು.

ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘದ ವತಿಯಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಆಯೋಜಿಸಿದ್ದ ಬೆಳ್ಳಿ ಚಪ್ಪರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಈ ಬಗ್ಗೆ ಹೋಟೆಲ್ ಮಾಲೀಕರ ಸಲಹೆ ಪಡೆಯಲಾಗುತ್ತದೆ. ಈ ಸಂಬಂಧ ಅಧಿಕಾರಿಗಳು ಕೂಡ ಸಮರ್ಪಕವಾಗಿ ಕ್ರಮ ಜರುಗಿಸಬೇಕು ಎಂದ ಅವರು, ಮುಂದಿನ ದಿನಗಳಲ್ಲಿ ಆಹಾರ ಮತ್ತು ಆರೋಗ್ಯದ ಕುರಿತು ಒಂದು ದಿನ ವಿಧಾನ ಮಂಡಲದಲ್ಲಿ ಚರ್ಚೆಗೆ ದಿನ ಮೀಸಲಿಡಲಾಗುವುದು ಎಂದು ತಿಳಿಸಿದರು.

ಆರೋಗ್ಯ ಬಗ್ಗೆ ಪೋಷಕರಿಗೆ ಜಾಗೃತಿ ಮೂಡಿಸುವ ಅಗತ್ಯ ಇದೆ. ಮಕ್ಕಳಲ್ಲಿ ಆರೋಗ್ಯಕರ ಆಹಾರ ಪದ್ಧತಿ ಬಗ್ಗೆ ಅರಿವು ಮೂಡಿಸಬೇಕಿದೆ. ನಾಲಿಗೆಗೆ ರುಚಿ ತಿನ್ನುವ ಬದಲು ದೇಹಕ್ಕೆ ಹಿತವಾದದ್ದನ್ನು ಸ್ವೀಕರಿಸಬೇಕಿದೆ ಎಂದು ಸಲಹೆ ನೀಡಿದರು.

ಸಹಕಾರಿ ತತ್ವದ ಅಡಿ ದುಡಿಯುವವರಿಗೆ ಆತ್ಮವಿಶ್ವಾಸ ಹೆಚ್ಚಿರುತ್ತದೆ. ಮೈಸೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದಿದೆ. ಕರ್ನಾಟಕಕ್ಕೆ ಬರುವವರು ಇಲ್ಲಿಗೆ ಬಂದೇ ಬರುತ್ತಾರೆ. ಇಲ್ಲಿನ ತಿಂಡಿ-ತಿನಿಸು ವಿಶ್ವವಿಖ್ಯಾತಿ ಪಡೆದಿದೆ. ಇದರಲ್ಲಿ ಹೋಟೆಲ್ ಉದ್ಯಮಿಗಳ ಪಾಲು ಹೆಚ್ಚಿದೆ ಎಂದರು.

ಯುವಜನರು ಹಿರಿಯರ ಈ ಉದ್ಯಮ ಪರಂಪರೆಯನ್ನು ಮುಂದುವರಿಸಬೇಕು. ಫಾಸ್ಟ್‌ಪುಡ್ ಸಂಸ್ಕೃತಿ ಬಂದ ನಂತರ ಹೋಟೆಲ್ ಉದ್ಯಮ ಸವಾಲು ಎದುರಿಸುತ್ತಿದೆ. ಇಲ್ಲಿ ಪರಿಶ್ರಮ ಪಡುವವರು ಖಂಡಿತ ಯಶಸ್ಸು ಕಾಣುತ್ತಾರೆ. ಯುವ ಉದ್ಯಮಿಗಳು ಈ ಬಗ್ಗೆ ಗಮನ ನೀಡಬೇಕು. ಮೈಸೂರನ್ನು ಇನ್ನಷ್ಟು ಚೆಂದಗಾಣಿಸಬೇಕು. ಗುಣಮಟ್ಟಕ್ಕೆ ಆದ್ಯತೆ ನೀಡಬೇಕು ಎಂದರು.

ಇದೇ ವೇಳೆ ಉದ್ಯಮಿಗಳಾದ ಎಂ.ಕೆ.ಪುರಾಣಿಕ್, ಸುಧಾಕರ ಎಸ್.ಶೆಟ್ಟಿ, ಶಿವಕುಮಾರ್, ಎಂ.ವಿಷ್ಣುಮೂರ್ತಿ ಹಾಗೂ ವಿ.ಎಸ್.ರವಿಶಾಸ್ತ್ರಿ ಅವರನ್ನು ಸನ್ಮಾನಿಸಲಾಯಿತು.

ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮ ಅಧ್ಯಕ್ಷ ಶ್ರೀ ಮುಕ್ತಿದಾನಂದ ಸ್ವಾಮೀಜಿ, ಬೇಬಿ ಮಠದ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಂಘ ಅಧ್ಯಕ್ಷ ನಾರಾಯಣ ವಿ.ಹೆಗಡೆ, ನಿರ್ದೇಶಕರಾದ ಆನಂದ್ ಶೆಟ್ಟಿ, ಸುಬ್ರಹ್ಮಣ್ಯ ಆರ್.ಕಂತ್ರಿ, ಪಿ. ನಾರಾಯಣ ಕುಂದರ್, ಎಂ.ರಘುವೀರ್ ಪುರಾಣಿಕ್, ಹೇಮಂತ್ ಕುಮಾರ್, ಜಯಪ್ರಕಾಶ್, ಸುಲೋಚನಾ ಚಂದ್ರಶೇಖರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net