ಗಡಿಯಲ್ಲಿ ತಪಾಸಣೆ ಬಿಗು, ಕರ್ನಾಟಕ-ಕೇರಳ ಅಂತಾರಾಜ್ಯ ಬಸ್ ಪ್ರಯಾಣ ಸ್ಥಗಿತ

Talapady Border
Published on

ಮಂಗಳೂರು: ಕೋವಿಡ್ ಆತಂಕ ಹಿನ್ನೆಲೆಯಲ್ಲಿ ಕೇರಳ ಮತ್ತು ಮಹಾರಾಷ್ಟ್ರದ ಪ್ರಯಾಣಿಕರಿಗೆ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯಗೊಳಿಸಿರುವ ಕಾರಣ ಭಾನುವಾರ ಕರ್ನಾಟಕ-ಕೇರಳ ಗಡಿ ಪ್ರದೇಶಗಳಲ್ಲಿ ತಪಾಸಣೆ ಬಿಗುಗೊಂಡಿದೆ.

ದಕ್ಷಿಣ ಕನ್ನಡ ಮತ್ತು ಕಾಸರಗೋಡು ಅಂತರ್ ಜಿಲ್ಲಾ ಬಸ್ ಪ್ರಯಾಣ ಪೂರ್ಣಪ್ರಮಾಣದಲ್ಲಿ ಸ್ಥಗಿತಗೊಂಡಿದೆ. ಆದರೆ ಉಭಯ ರಾಜ್ಯಗಳ ಬಸ್‌ಗಳು ಗಡಿ ಪ್ರದೇಶಕ್ಕಿಂತ ಸ್ವಲ್ಪ ದೂರದ ತನಕ ಬಂದು ವಾಪಸಾಗುತ್ತಿವೆ. ಗಡಿ ಪ್ರದೇಶದಲ್ಲಿ ಪೊಲೀಸ್ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ತಪಾಸಣೆ ನಡೆಸುತ್ತಿದ್ದಾರೆ. ಕೋವಿಡ್ ನೆಗೆಟಿವ್ ಇದ್ದವರಿಗೆ ಮಾತ್ರ ಗಡಿ ದಾಟಲು ಅನುಮತಿ ನೀಡಲಾಗಿದೆ.

ಆರೋಗ್ಯ ಇಲಾಖೆ ಜಿಲ್ಲೆಯ ಗಡಿ ಪ್ರದೇಶಗಳಲ್ಲಿ 25 ದಿನಗಳಲ್ಲಿ 15 ಸಾವಿರ ಮಂದಿಯ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಿದೆ. ರೈಲಿನಲ್ಲಿ ಹೊರ ರಾಜ್ಯದಿಂದ ಆಗಮಿಸುವ ಪ್ರಯಾಣಿಕರಿಗಾಗಿ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ನಿಯೋಜಿಸಿದ್ದ ಆರೋಗ್ಯ ಇಲಾಖೆಯ ತಂಡ 62 ಮತ್ತು ಮಂಗಳೂರು ಜಂಕ್ಷನ್‌ನಲ್ಲಿದ್ದ ತಂಡ ಭಾನುವಾರ ಮಧ್ಯಾಹ್ನ ತನಕ 47 ಮಂದಿಯ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಕಿಶೋರ್ ತಿಳಿಸಿದ್ದಾರೆ. ಕರ್ನಾಟಕದಲ್ಲಿ ಕೋವಿಡ್ ನಿರ್ಬಂಧ, ಕೇರಳದಲ್ಲಿ ವಾರಾಂತ್ಯ ಲಾಕ್‌ಡೌನ್ ಪರಿಣಾಮ ಈ ಭಾಗದಲ್ಲಿ (ರಾಷ್ಟ್ರೀಯ ಹೆದ್ದಾರಿ 66)ವಾಹನ ಸಾಂಚಾರ ವಿರಳವಾಗಿತ್ತು.

ಅಡೂರು ಸಮೀಪವಾಸಿಗಳಿಗೆ ಸಮಸ್ಯೆ: ಸುಳ್ಯ: ಕರ್ನಾಟಕ-ಕೇರಳವನ್ನು ಬೆಸೆಯುವ ಮಂಡೆಕೋಲು ಗ್ರಾಮದ ಅಡೂರು ಗಡಿಯ ಬಳಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಕೇರಳ-ಕರ್ನಾಟಕದ ನಡುವೆ ಬಸ್ ಸಂಚಾರ ನಿರ್ಧಾರದಿಂದ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕಾಸರಗೋಡು ಜಿಲ್ಲೆಯ ಗಡಿ ಭಾಗದಲ್ಲಿ ವಾಸಿಸುವವರು ಕಷ್ಟ ಪಡುವಂತಾಯಿತು. ಗಡಿಭಾಗಗಳಲ್ಲಿ ವಾಸಿಸುವ ಕಟ್ಟಡ ಕಾರ್ಮಿಕರು ಕೂಡಾ ಗಡಿ ಭಾಗಗಳಲ್ಲಿ ಸಂಚರಿಸಲು ನಿರ್ಬಂಧವಿರುವ ಕಾರಣ ತೊಂದರೆ ಅನುಭವಿಸುವಂತಾಯಿತು. ಕೇರಳದಿಂದ ಆಗಮಿಸುವವರು 72 ಗಂಟೆಯ ಒಳಗಿನ ಕೋವಿಡ್ ಪಾಸಿಟಿವ್ ವರದಿ ನೀಡುವುದು ಕಡ್ಡಾಯವಾಗಿದ್ದು, ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ.

ಕೇರಳ ಸಂಪರ್ಕ ರಸ್ತೆಗಳ ಮೇಲೆ ನಿಗಾ: ವಿಟ್ಲ: ಪೊಲೀಸ್ ಠಾಣೆ ವ್ಯಾಪ್ತಿಯ ಕೇರಳ ಸಂಪರ್ಕಿಸುವ ಎಲ್ಲ ರಸ್ತೆಗಳಲ್ಲಿ ಕೋವಿಡ್ ನೆಗೆಟಿವ್ ವರದಿ ಇದ್ದರೆ ಮಾತ್ರ ಸಂಚಾರಕ್ಕೆ ಅನುವು ಮಾಡಲಾಗುತ್ತಿದೆ. ಸುಮಾರು 18 ರಸ್ತೆಗಳ ಮೂಲಕ ಕೇರಳ ಸಂಪರ್ಕ ಸಾಧ್ಯವಿದ್ದು, ಪೊಲೀಸ್ ನಿಗಾ ಇಡಲಾಗಿದೆ. ಕನ್ಯಾನ, ಸಾಲೆತ್ತೂರು, ಸಾರಡ್ಕ, ಪೆರುವಾಯಿ ಭಾಗದಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ.

ಏರುಗತಿಯಲ್ಲಿ ಕೋವಿಡ್ ಪ್ರಕರಣ: ದ.ಕ.ದಲ್ಲಿ 410, ಉಡುಪಿಯಲ್ಲಿ 162 ಸೋಂಕಿತರು: ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಮತ್ತೆ ಏರುಗತಿಯಲ್ಲಿ ಸಾಗಿದ್ದು, ಭಾನುವಾರ ಹೊಸ 410 ಜನರಲ್ಲಿ ಸೋಂಕು ದೃಢಪಟ್ಟಿದೆ. ಆರು ಮಂದಿ ಮೃತಪಟ್ಟಿದ್ದಾರೆ. 264 ಮಂದಿ ಗುಣವಾಗಿದ್ದಾರೆ.

ಜಿಲ್ಲೆಯಲ್ಲಿ ಇಲ್ಲಿಯ ತನಕ ಒಟ್ಟು ಕರೊನಾ ಸೋಂಕು ದೃಢಪಟ್ಟ 1,427 ಮಂದಿ ಮೃತಪಟ್ಟಿದ್ದಾರೆ. ಈವರೆಗೆ ಒಟ್ಟು 10,0780 ಮಂದಿ ಕರೊನಾ ಸೋಂಕಿಗೊಳಗಾಗಿದ್ದು, ಈ ಪೈಕಿ 96,407 ಮಂದಿ ಗುಣವಾಗಿದ್ದಾರೆ. ಸದ್ಯ 2943 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯ 5 ಪ್ರದೇಶಗಳನ್ನು ಹೊಸ ಕಂಟೇನ್ಮೆಂಟ್ ಜೋನ್‌ಗಳಾಗಿ ಘೋಷಣೆ ಮಾಡಲಾಗಿದೆ. ಮಂಗಳೂರಿನಲ್ಲಿ ಎರಡು ಮತ್ತು ಬೆಳ್ತಂಗಡಿಯಲ್ಲಿ ಮೂರು ಕಂಟೇನ್ಮೆಂಟ್ ಜೋನ್‌ಗಳಾಗಿ ಗುರುತಿಸಲಾಗಿದೆ. ಕಾಸರಗೋಡು ಜಿಲ್ಲೆಯ 707 ಮಂದಿಗೆ ಭಾನುವಾರ ಕೋವಿಡ್ ದೃಢಪಟ್ಟಿದೆ.

ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆಗೊಳಪಟ್ಟ 2,910 ಜನರಲ್ಲಿ 162 ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ಇದರಲ್ಲಿ ಚಿಕಿತ್ಸೆಗಾಗಿ 15 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೋವಿಡ್‌ನಿಂದ ಉಡುಪಿ ತಾಲೂಕಿನ 56 ವರ್ಷದ ಪುರುಷ ನಿಧನರಾಗಿದ್ದಾರೆ. 66 ಮಂದಿ ಕೋವಿಡ್‌ನಿಂದ ಗುಣವಾಗಿದ್ದಾರೆ. 1200 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ್ ಉಡುಪ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net