

ಚಾಮರಾಜನಗರ : ಕೇರಳದ ಕೋಯಿಕ್ಕೋಡ್‌ನಲ್ಲಿ ನಿಫಾ ವೈರಸ್‌ನಿಂದ ಇಬ್ಬರು ಸಾವಿಗೀಡಾದ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ತಾಲೂಕಿನ ಮೂಲೆಹೊಳೆ ಚೆಕ್ ಪೋಸ್ಟ್‌ನಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಕ್ರೀನಿಂಗ್ ಹಾಗೂ ಕರಪತ್ರ ಹಂಚಿ ಅರಿವು ಮೂಡಿಸುವ ಕಾರ್ಯ ಆರಂಭಿಸಿದ್ದಾರೆ. ಕೋಯಿಕ್ಕೋಡ್‌ನಲ್ಲಿ ನಾಲ್ವರಿಗೆ ಸೋಂಕು ಕಾಣಿಸಿಕೊಂಡಿದೆ.
ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಗುರುವಾರ ಮೂಲೆಹೊಳೆ ಚೆಕ್ ಪೋಸ್ಟ್‌ನಲ್ಲಿ ಸಿಬ್ಬಂದಿ ನಿಯೋಜಿಸಿ ಥರ್ಮಲ್ ಸ್ಕ್ಯಾನ್ ಮಾಡುವ ಮೂಲಕ ಬಸ್ಸು, ಕಾರುಗಳಲ್ಲಿ ಸಂಚರಿಸುವ ಪ್ರಯಾಣಿಕರ ತಾಪಮಾನ ಪರೀಕ್ಷೆ ನಡೆಸಲಾಗುತ್ತಿದೆ. ಕೇರಳದಿಂದ ತಾಲೂಕಿನತ್ತ ಬರುವ ಹಂದಿ, ಕೋಳಿ ಮುಂತಾದ ಪ್ರಾಣಿಗಳ ಸಾಗಣೆ ಬಗ್ಗೆ ಗಮನಹರಿಸಿದ್ದು, ಜಾನುವಾರು ಹಾಗೂ ಮಾಂಸ ಸಾಗಣೆಯಲ್ಲಿ ತೊಡಗಿರುವ ವಾಹನಗಳಿಗೂ ಸ್ಯಾನಿಟೈಜ್ ಮಾಡಲಾಯಿತು.
ಕರಪತ್ರ ಹಂಚಿ ಅರಿವು :
ನಿಫಾ ವೈರಸ್ ಸೋಂಕಿನ ಲಕ್ಷಣಗಳು, ಮುನ್ನೆಚ್ಚರಿಕೆ ಮುಂತಾದವುಗಳ ಬಗ್ಗೆ ಚೆಕ್ ಪೋಸ್ಟ್‌ನಲ್ಲಿ ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರಲ್ಲಿ ಅರಿವು ಮೂಡಿಸುವ ಕರಪತ್ರ ವಿತರಣೆ ಮಾಡಲಾಗುತ್ತಿದೆ. ಜ್ವರದ ಲಕ್ಷಣಗಳಿರುವ ಪ್ರಯಾಣಿಕರನ್ನು ಬಸ್ಸುಗಳಿಗೆ ಹತ್ತುವ ಮೊದಲೇ ಅವರನ್ನು ಮನವೊಲಿಸಿ ಆಸ್ಪತ್ರೆಗೆ ಕಳುಹಿಸುವ ಬಗ್ಗೆ ಸಾರಿಗೆ ಸಿಬ್ಬಂದಿಗೆ ಮನವರಿಕೆ ಮಾಡಲಾಯಿತು. ಸ್ಥಳದಲ್ಲಿ ಜಿಲ್ಲಾ ಸರ್ವೇಲೆನ್ಸ್ ಅಧಿಕಾರಿ ಡಾ.ಗಿರಿಧರ್, ತಾಲೂಕು ಆರೋಗ್ಯಾಧಿಕಾರಿ ಡಾ.ಅಲೀಂಪಾಶಾ, ಆರೋಗ್ಯ ನಿರೀಕ್ಷಕ ಪುಟ್ಟಸ್ವಾಮಿ ಇತರರು ಇದ್ದರು.
ಕೇರಳದ ಅಂಚಿನಲ್ಲಿ ಬರುವ ಎಲ್ಲ ಗ್ರಾಮಗಳಲ್ಲಿ ಆರೋಗ್ಯ ಸಿಬ್ಬಂದಿ ಮನೆ, ಮನೆಗಳಿಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸಲಿದ್ದಾರೆ. ಸೋಂಕಿನ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಶಂಕಿತ ರೋಗಿಗಳಿಗೆ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಿ ಲಕ್ಷಣಗಳು ಕಂಡುಬಂದರೆ ಪ್ರತ್ಯೇಕ ವಾರ್ಡ್‌ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುವುದು.
ಡಾ.ಅಲೀಂ ಪಾಷಾ, ಆರೋಗ್ಯಾಧಿಕಾರಿ ಗುಂಡ್ಲುಪೇಟೆ ತಾಲೂಕು.