ಸಕ್ಕರೆ ಕಾರ್ಖಾನೆಗಳ ಮೇಲೆ ಕಠಿಣ ಕ್ರಮ

Strict action on sugar factories
ವಿಜಯಪುರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಂಣದಲ್ಲಿ ಸಕ್ಕರೆ ಕಾರ್ಖಾನೆಗಳ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ. ಭೂಬಾಲನ್​ ಮಾತನಾಡಿದರು. ಶಂಕರ ಮಾರಿಹಾಳ, ಗುರುನಾಥ ದಡ್ಡೆ, ಆಬೀದ ಗದ್ಯಾಳ ಮತ್ತಿತರರಿದ್ದಾರೆ.
Published on

ವಿಜಯಪುರ: ಜಿಲ್ಲೆಯಲ್ಲಿರುವ ಎಲ್ಲ ಸಕ್ಕರೆ ಕಾರ್ಖಾನೆಗಳು ಪ್ರಸಕ್ತ ಸಾಲಿನ ಹಂಗಾಮಿಗೆ ಸರ್ಕಾರದ ಆದೇಶದಂತೆ ಕಬ್ಬು ನುರಿಸುವ ಕಾರ್ಯ ಆರಂಭಿಸುವಂತೆ ಜಿಲ್ಲಾಧಿಕಾರಿ ಟಿ. ಭೂಬಾಲನ್​ ಸೂಚನೆ ನೀಡಿದ್ದಾರೆ.

ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಸರ್ಕಾರದ ಆದೇಶದಂತೆ ಕಬ್ಬು ನುರಿಸುವ ಕಾರ್ಯ ಆರಂಭಿಸಬೇಕು. ಇನ್ನು ಬಸವೇಶ್ವರ ಸಕ್ಕರೆ ಕಾರ್ಖಾನೆ ಕಬ್ಬು ಒದಗಿಸಿದ ರೈತರಿಗೆ ಬಿಲ್​ ಪಾವತಿಯಲ್ಲಿ ವಿಳಂಬ, ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಕಬ್ಬು ನುರಿಸುವುದು ಸೇರಿದಂತೆ ನಿಯಮಗಳನ್ನು ಉಲ್ಲಂಸಿರುವುದರಿಂದ ಬಸವೇಶ್ವರ ಸಕ್ಕರೆ ಕಾರ್ಖಾನೆಗೆ ಕಬ್ಬು ನುರಿಸುವುದು ತಡೆಹಿಡಿಯಲಾಗಿದೆ ಎಂದು ತಿಳಿಸಿದರು. ಉಳಿದಂತೆ ಎಲ್ಲ ಕಾರ್ಖಾನೆಗಳು ಕಬ್ಬು ನುರಿಸುವ ಕಾರ್ಯ ಆರಂಭಿಸಿ ಕಬ್ಬು ಒದಗಿಸಿದ ರೈತರಿಗೆ ಯಾವುದೇ ವಿಳಂಬ ಮಾಡದೇ ನಿಗದಿತ 14 ದಿನಗಳೊಳಗಾಗಿ ಬಿಲ್​ ಪಾವತಿಸಲು ಕ್ರಮ ವಹಿಸುವಂತೆ ಸೂಚನೆ ನೀಡಿದರು.

ಕಬ್ಬು ನುರಿಸುವ ಮೊದಲು ಎಲ್ಲ ಸಕ್ಕರೆ ಕಾರ್ಖಾನೆಗಳು ತೂಕದ ಯಂತ್ರಗಳು ಡಿಜಿಟಲೀಕರಣಗೊಂಡಿರುವ ಕುರಿತು ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು. ಡಿಜಿಟಲೀಕರಣಗೊಳ್ಳದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ನುರಿಸಲು ಅವಕಾಶ ನೀಡುವುದಿಲ್ಲ. ಸ್ಟಾಪಿಂಗ್​ ಕಾರ್ಯ ಪೂರ್ಣಗೊಂಡಿರಬೇಕು. ಪಕ್ವವಾಗಿರುವ ಕಬ್ಬನ್ನು ಆದ್ಯತೆಯ ಮೇರೆಗೆ ಕಟಾವು ಮಾಡಿ ನುರಿಸಬೇಕು ಎಂದರು.

ಕೆಎಸ್​ಪಿಸಿಬಿಯಿಂದ ನಿರ್ಧರಿತ ಕಾರ್ಖಾನೆ ನುರಿಸುವ ಸಾಮರ್ಥ್ಯಕ್ಕನುಗುಣವಾಗಿ ಮಾತ್ರ ಕಬ್ಬು ನುರಿಸಬೇಕು. ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಕಬ್ಬು ನುರಿಸದಂತೆ ಅವರು ಎಚ್ಚರಿಕೆ ನೀಡಿದರು.

ಲ್ಲೆಯಲ್ಲಿ ಬ್ಯಾಂಕ್​ ಖಾತೆ ಹೊಂದಿರಬೇಕು. ಈ ಖಾತೆಯಿಂದಲೇ ಸಕ್ಕರೆ, ಮಾರಾಟ ವ್ಯವಹಾರ ನಿರ್ವಹಣೆಯಾಗಬೇಕು. ಈ ಕುರಿತು ಆಹಾರ ಮತ್ತು ನಾಗರಿಕರ ಸಬರಾಜು ಇಲಾಖೆ ಉಪನಿರ್ದೇಶಕರು ದೃಢೀಕರಣ ಮಾಡುವಂತೆ ತಿಳಿಸಿದರು.

ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ ಮಾತನಾಡಿ, ರೈತರಿಗೆ ಬಿಲ್​ ಪಾವತಿಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ನಿಗದಿತ ಅವಧಿಯೊಳಗೆ ಬಿಲ್​ ಪಾವತಿಗೆ ಕ್ರಮ ವಹಿಸಬೇಕೆಂದು ಸೂಚಿಸಿದರು. ಸಕ್ಕರೆ ಕಾರ್ಖಾನೆಗಳು ಕಬ್ಬು ಸಾಗಾಣಿಕೆ ವಾಹನ ಚಾಲಕರಿಗೆ ಸೂಕ್ತ ತಿಳುವಳಿಕೆ ಮೂಡಿಸಬೇಕು. ಕಬ್ಬು ಸಾಗಾಣಿಕೆ ಮಾಡುವ ಪ್ರತಿಯೊಂದು ಟ್ರಾಕ್ಟರ್​&ವಾಹನಗಳಿಗೆ ಕಡ್ಡಾಯವಾಗಿ ರಿಫ್ಲೆಕ್ಟರ್​ಗಳನ್ನು ಅಳವಡಿಸುವ ಜತೆಗೆ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ತಿಳಿಸಿದರು.

ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ, ಇಂಡಿ ಉಪವಿಭಾಗಾಧಿಕಾರಿ ಆಬೀದ ಗದ್ಯಾಳ, ಆಹಾರ ಮತ್ತು ನಾಗರಿಕರ ಸಬರಾಜು ಇಲಾಖೆ ಉಪನಿರ್ದೇಶಕ ವಿನಯಕುಮಾರ ಪಾಟೀಲ, ಆಹಾರ ಇಲಾಖೆ ಶಿರಸ್ತೇದಾರ ಅಮರೇಶ ತಾಂಡೂರ, ವಿವಿಧ ಅಧಿಕಾರಿಗಳು, ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ವ್ಯವಸ್ಥಾಪಕ ನಿರ್ದೇಶಕರು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net