

ಗುಂಡ್ಲುಪೇಟೆ: ಅರಣ್ಯ ಸಂರಕ್ಷಣೆ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಸರ್ಕಾರ ಕಾನೂನುಗಳನ್ನು ಜಾರಿಗೆ ತಂದಿದ್ದು, ಇದನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಅರಣ್ಯ ಸಂಚಾರಿ ಘಟಕದ ಸಬ್‌ಇನ್‌ಸ್ಪೆಕ್ಟರ್ ಯಾಸ್ಮಿನ್ ತಾಜ್ ಹೇಳಿದರು.
ಪಟ್ಟಣದ ಕೆ.ಎಸ್.ನಾಗರತ್ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಚಾಮರಾಜನಗರ ಸಿಐಡಿ ಅರಣ್ಯ ಸಂಚಾರಿ ಘಟಕದಿಂದ ಅರಣ್ಯ ಸಂಪತ್ತು ಮತ್ತು ಅರಣ್ಯ ಸಂರಕ್ಷಣೆಯ ಬಗ್ಗೆ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇತ್ತೀಚೆಗೆ ಅರಣ್ಯನಾಶದಿಂದ ಪರಿಸರದ ಮೇಲೆ ತುಂಬಾ ಪರಿಣಾಮ ಬೀರುತಿದ್ದು, ಕಾಡು ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಕಠಿಣ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಸಾಗುವಾನಿ ಮರಗಳ ಅಕ್ರಮ ಸಂಗ್ರಹ, ಮಾಂಸ ಹಾಗೂ ಚರ್ಮಕ್ಕಾಗಿ ವನ್ಯಜೀವಿಗಳ ಹತ್ಯೆ, ಅವುಗಳ ಅಂಗಾಂಗಗಳನ್ನು ಇಟ್ಟುಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದ್ದು, ಕಠಿಣ ಶಿಕ್ಷೆ ವಿಧಿಸಲಾಗುತ್ತಿದೆ. ಈ ಬಗ್ಗೆ ವಿದ್ಯಾರ್ಥಿಗಳು ತಮ್ಮ ಪಾಲಕರಿಗೆ ಮನವರಿಕೆ ಮಾಡಿಕೊಡಬೇಕು ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ವಿ.ಆರ್. ಬಾಲಸುಬ್ರಹ್ಮಣ್ಯಂ, ಅರಣ್ಯ ಸಂಚಾರಿ ಘಟಕದ ಸಿಬ್ಬಂದಿ ನವೀನ್, ಸ್ವಾಮಿ, ಮಾದೇಶ್ ಕುಮಾರ್, ರಾಜು ಮತ್ತು ಕಾಲೇಜಿನ ವಿದ್ಯಾರ್ಥಿಗಳು ಇದ್ದರು.