ಕಾನೂನು ಮೀರಿದರೆ ಬಿಗಿ ಕ್ರಮ

ಗೌರಿ ಗಣೇಶ ಹಾಗೂ ಈದ್ ಮಿಲಾದ್ ಅಂಗವಾಗಿ ಪಟ್ಟಣದ ಸಮೀಪದ ಭರತ್ ಕನ್ವೆನ್ಷನ್ ಸಭಾಂಗಣದಲ್ಲಿ ಕರೆಯಲಾಗಿದ್ದ ಶಾಂತಿ ಸಭೆಯಲ್ಲಿ ಎಸ್‌ಪಿ ಮೊಹಮ್ಮದ್ ಸುಜಿತಾ ಮಾತನಾಡಿದರು.
ಗೌರಿ ಗಣೇಶ ಹಾಗೂ ಈದ್ ಮಿಲಾದ್ ಅಂಗವಾಗಿ ಪಟ್ಟಣದ ಸಮೀಪದ ಭರತ್ ಕನ್ವೆನ್ಷನ್ ಸಭಾಂಗಣದಲ್ಲಿ ಕರೆಯಲಾಗಿದ್ದ ಶಾಂತಿ ಸಭೆಯಲ್ಲಿ ಎಸ್‌ಪಿ ಮೊಹಮ್ಮದ್ ಸುಜಿತಾ ಮಾತನಾಡಿದರು.
Published on

ಬೇಲೂರು: ಈ ಭಾಗದಲ್ಲಿ ಎಲ್ಲ ಧರ್ಮಿಯರು ಸೌಹಾರ್ದದಿಂದಿದ್ದು, ಹಬ್ಬಗಳ ವೇಳೆ ಈವರೆಗೆ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಿಲ್ಲ. ಅದೇ ರೀತಿ ಸೆ.5 ರಂದು ಈದ್ ಮಿಲಾದ್ ಇರುವುದರಿಂದ ಯಾರೇ ಆಗಲಿ ಕಾನೂನು ಮೀರಿ ನಡೆದುಕೊಂಡರೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮದ್ ಸುಜಿತಾ ಎಚ್ಚರಿಸಿದರು.

ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಅಂಗವಾಗಿ ಪಟ್ಟಣ ಸಮೀಪದ ಭರತ್ ಕನ್ವೆನ್ಷನ್ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಕರೆಯಲಾಗಿದ್ದ ಸರ್ವ ಧರ್ಮಿಯರ ಶಾಂತಿ ಸಭೆಯಲ್ಲಿ ಮಾತನಾಡಿದರು.

ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬವು ಒಟ್ಟೊಟ್ಟಿಗೆ ಬಂದಿರುವುದರಿಂದ ಎಲ್ಲರೂ ಶಾಂತಿಯುತವಾಗಿ ಆಚರಿಸಬೇಕು. ಸೌಹಾರ್ದತೆಗೆ ಹೆಸರಾಗಿರುವ ಬೇಲೂರಿನಲ್ಲಿ ಇಲ್ಲಿಯವರೆಗೆ ಯಾವುದೇ ಅಹಿತಕರ ಘಟನೆಗೆ ಅವಕಾಶವಾಗಿಲ್ಲ. ಮುಂದೆಯೂ ಆಗದಂತೆ ಎಲ್ಲರೂ ಇಲಾಖೆಯೊಂದಿಗೆ ಸಹಕರಿಸಬೇಕು. ಅಲ್ಲದೆ ಮೆರವಣಿಗೆ ಸಂದರ್ಭ ಆಯೋಜಕರು ಕೆಲವು ನಿಯಮಗಳನ್ನು ಪಾಲಿಸಬೇಕಿದೆ. ಅವುಗಳನ್ನು ನಮ್ಮ ಅಧಿಕಾರಿಗಳು ತಿಳಿಸಲಿದ್ದಾರೆ. ಮತ್ತು ಗಣಪತಿ-ಈದ್ ಮಿಲಾದ್ ಹಬ್ಬದ ಮೆರವಣಿಗೆ ವೇಳೆ ಸಂಘಟಕರು ಎಚ್ಚರಿಕೆಯಿಂದ ಇರಬೇಕು ಎಂದರು.

ಅರಸೀಕೆರೆ ಡಿವೈಎಸ್‌ಪಿ ಗೋಪಿ ಮಾತನಾಡಿ, ಗಣೇಶ ಮತ್ತು ಈದ್ ಮಿಲಾದ್ ಆಚರಿಸುವ ಸಂಘಟಕರು ನಮ್ಮೊಟ್ಟಿಗೆ ಸಂಪರ್ಕದಲ್ಲಿರಬೇಕು. ತಾವೇ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಬಾರದು. ಬೇರೆ ಜಿಲ್ಲೆಯಿಂದ ಬಂದು ಪ್ರಚೋದನಕಾರಿ ಹೇಳಿಕೆಗೆ ಅವಕಾಶ ನೀಡಬೇಡಿ. ಸ್ನೇಹಿತರೊಂದಿಗೆ ಸರಿಯಾಗಿ ವರ್ತಿಸಬೇಕು. ಗಣಪತಿ ವಿಸರ್ಜನೆ ವೇಳೆ ಶಿಸ್ತಿನಿಂದ ಇರಬೇಕು. ಯಾವುದೇ ಕಾರಣಕ್ಕೂ ಅಹಿತಕರ ಘಟನೆಗೆ ಅವಕಾಶ ನೀಡಬಾರದು. ಸೆ. 5 ರಂದು ನಡೆಯುವ ಈದ್ ಮಿಲಾದ್ ದಿನದಂದು ಗಣೇಶ ವಿಸರ್ಜನೆಗೆ ಅವಕಾಶವಿಲ್ಲ. ಡಿಜೆ ಸೌಂಡ್ ಸಿಸ್ಟಮ್ ಬಳಸಲು ಅವಕಾಶವಿಲ್ಲ. ಸ್ಪೀಕರ್ ಸಹ ನಿಗದಿತ ಶಬ್ಧಕ್ಕೆ ಹೆಚ್ಚು ಬಳಕೆ ಮಾಡಬಾರದು. ಬ್ಯಾನರ್, ಬಂಟಿಂಗ್ಸ್ ಹಾಕಬಾರದು. ಸಾಮಾಜಿಕ ಜಾತಾಣಗಳಲ್ಲಿ ಇಲ್ಲ ಸಲ್ಲದ ಸುದ್ದಿ ಬಿತ್ತರಿಸಿದರೆ ಅಂತವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಪೊಲೀಸ್ ಇಲಾಖೆ ಕೇಳುವ ಎಲ್ಲ ಮಾಹಿತಿ ನೀಡಬೇಕು ಎಂದರು.

ಪೊಲೀಸ್ ಇನ್ಸ್‌ಪೆಕ್ಟರ್ ರೇವಣ್ಣ, ಪಿಎಸ್‌ಐಗಳಾದ ಶಿವನಗೌಡ.ಜಿ.ಪಾಟೀಲ್, ಹಳೇಬೀಡು ಬೇಲೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಯ್ಯದ್ ತೌಫಿಕ್, ವೀರಾಂಜನೇಯಸ್ವಾಮಿ ಟ್ರಸ್ಟ್ ಅಧ್ಯಕ್ಷ ಮೋಹನ್, ಪುರಸಭೆ ಸದಸ್ಯ ಜಮಾಲುದ್ದೀನ್, ಕರವೇ ಅಧ್ಯಕ್ಷ ಚಂದ್ರಶೇಖರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net