ಒತ್ತುವರಿ ತೆರವುಗೊಳಿಸದಿದ್ದರೆ ಕಠಿಣ ಕ್ರಮ; ಸಚಿವ ಎಂ.ಬಿ. ಪಾಟೀಲ

MINISTER M B PATIL MEETING
ವಿಜಯಪುರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಸಭೆ ನಡೆಸಿದರು. ಜಿಲ್ಲಾಧಿಕಾರಿ ಟಿ.ಭೂಬಾಲನ್, ಸಿಇಒ ರಿಷಿ ಆನಂದ ಮತ್ತಿತರರಿದ್ದಾರೆ.
Published on

ವಿಜಯಪುರ: ಒತ್ತುವರಿಗೊಂಡಿರುವ ರಾಜಕಾಲುವೆ, ಚರಂಡಿ ಹಾಗೂ ಐತಿಹಾಸಿಕ ಕಂದಗಳು ಸೇರಿದಂತೆ ಸರ್ಕಾರದ ಯಾವುದೇ ಪ್ರದೇಶವಾಗಲಿ ಕೂಡಲೇ ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕೆಂದು ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಅಧಿಕಾರಿಗಳಿಗೆ ಖಡಕ್ ಸಂದೇಶ ರವಾನಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಅತಿವೃಷ್ಟಿ ಹಿನ್ನೆಲೆ ಬುಧವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ನಗರದಲ್ಲಿ ಪ್ರಮುಖ ಸ್ಥಳಗಳು ಒತ್ತುವರಿಯಾದ ಹಿನ್ನೆಲೆ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆ ನೀರು ಎಲ್ಲೆಂದರಲ್ಲಿ ಸಂಗ್ರಹಗೊಳ್ಳುತ್ತಿದೆ. ಹೀಗಾಗಿ ಯಾವುದೇ ನೆಪ ಹೇಳದೆ ಕೂಡಲೇ ಒತ್ತುವರಿ ತೆರವುಗೊಳಿಸಬೇಕು ಎಂದರು.

ರಾಜುಕಾಲುವೆ, ಚರಂಡಿ ಮೊದಲಾದವುಗಳ ಕಡೆ ಒತ್ತುವರಿಯಾಗಿರುವುದರಿಂದ ಚರಂಡಿಗಳು ಬ್ಲಾಕ್ ಆಗಿ, ಮಳೆ ನೀರು ಹರಿದು ಹೋಗದಂತಹ ಸ್ಥಿತಿ ಇದೆ. ಈ ಕಾರಣಕ್ಕಾಗಿಯೇ ದೊಡ್ಡ ಪ್ರಮಾಣದಲ್ಲಿ ನೀರು ಸಂಗ್ರಹಗೊಂಡು ಬಡಾವಣೆಗಳಿಗೆ ನುಗ್ಗುತ್ತಿದೆ. ಮಳೆ ಹಾನಿಗಿಂತ ಚರಂಡಿ ನೀರು ಸಂಗ್ರಹಗೊಂಡು ಹೆಚ್ಚಿಗೆ ಹಾನಿಯಾಗುತ್ತಿದೆ. ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ ಮಳೆ ನೀರು ಮತ್ತಷ್ಟು ಅವಾಂತರ ಸೃಷ್ಠಿಸುತ್ತಿದೆ. ಹೀಗಾಗಿ ಒತ್ತುವರಿ ತೆರವುಗೊಳಿಸಿದರೆ ಚರಂಡಿ ನೀಡು ಸರಾಗಬಾಗಿ ಹೋಗಲು ಅನುಕೂಲವಾಗಲಿದೆ. ಆದ್ದರಿಂದ ಕೂಡಲೇ ಒತ್ತುವರಿ ಕಾರ್ಯಾಚರಣೆ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಪ್ರಭಾವಕ್ಕೆ ಮಣಿಯಬೇಡಿ

ಐತಿಹಾಸಿಕ ಸ್ಮಾರಕಗಳ ವ್ಯಾಪ್ತಿಯಲ್ಲಿ ತೆರವು ಕಾರ್ಯಾಚರಣೆ ಕೈಗೊಂಡರೆ ಸಾಕಷ್ಟು ಅಡೆತಡೆ ಬರುತ್ತವೆ. ನೋಟಿಸ್ ಬರುತ್ತವೆ. ಆದರೆ, ಪ್ರಭಾವಿಗಳು ಒತ್ತುವರಿ ಮಾಡಿದರೆ ಜನ ಮೌನವಹಿಸುತ್ತಾರೆ. ಇದರಿಂದಾಗಿಯೇ ಸಮಸ್ಯೆ ಹೆಚ್ಚಾಗುತ್ತಿರುವುದು. ಇನ್ಮುಂದೆ ಯಾರದ್ದೇ ಮುಲಾಜಿಗೆ ಒಳಗಾಗುವುದು ಬೇಡ. ಪ್ರಭಾವಕ್ಕೆ ಮಣಿಯಬೇಡಿ. ನನ್ನದೇ ಮನೆ ಇದ್ದರೂ ಸರಿ ತೆರವುಗೊಳಿಸಿ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದರು.
ಒತ್ತುವರಿ ತೆರವಿಗೆ ಎರಡು ವಾರದಲ್ಲಿ ಕ್ರಮ ವಹಿಸದೇ ಹೋದರೆ ನಾನೇ ಕ್ರಮ ವಹಿಸಬೇಕಾಗುತ್ತದೆ, ನೀರು ಸರಬರಾಜು ಹಾಗೂ ಒಳ ಚರಂಡಿ ಮಂಡಳಿ, ಪಾಲಿಕೆಯ ಅಧಿಕಾರಿಗಳನ್ನೇ ಇದಕ್ಕೆ ಹೊಣೆಗಾರರನ್ನಾಗಿ ಮಾಡಲಾಗುವುದು. ಕೂಡಲೇ ಇನ್ನೊಂದು ಸಭೆ ಕರೆಯುತ್ತೇನೆ, ಈ ಸಭೆಯ ವೇಳೆಗೆ ಒತ್ತುವರಿ ತೆರವು ಕಾರ್ಯ ಒಂದು ಹಂತಕ್ಕೆ ಬಂದಿರಬೇಕು ಎಂದರು.

ಡೋಣಿ ಹೂಳು ತೆಗೆಯಲು ಕ್ರಮ

ಮಳೆ ಹಾನಿಗೆ ಸಂಬಂಧಿಸಿದಂತೆ ನಿಖರವಾಗಿ ಸಮೀಕ್ಷೆ ನಡೆಸಬೇಕು. ಒಂದೇ ಒಂದು ಎಕರೆ ಪ್ರದೇಶವೂ ಸಮೀಕ್ಷೆಯಿಂದ ವಂಚಿತವಾಗಬಾರದು. ಕೃಷಿ, ತೋಟಗಾರಿಕೆ ಇಲಾಖೆ ಜಂಟಿಯಾಗಿ ಸಮೀಕ್ಷೆ ಕೈಗೊಳ್ಳಬೇಕು ಎಂದರು.

ರಸ್ತೆಗಳು ಹಾಳಾಗಿದ್ದರೆ, ಶಾಲಾ ಕಟ್ಟಡಗಳು ಹಾನಿಗೀಡಾಗಿದ್ದರೆ ತಕ್ಷಣವೇ ದುರಸ್ತಿ ಕಾರ್ಯ ಕೈಗೊಳ್ಳಿ. ಡೋಣಿ ನದಿ ಹೂಳು ತೆಗೆಯುವ ಕಾರ್ಯ ವೇಗವಾಗಿ ಆರಂಭಿಸಿ, ನದಿಪಾತ್ರದಲ್ಲಿ ಬೆಳೆದ ಜಾಲಿ ಕಂಟಿಗಳನ್ನು ಕೂಡಲೇ ತೆರವುಗೊಳಿಸಿ, ಪ್ರಮುಖವಾಗಿ ಸೇತುವೆ ಕೆಳಭಾಗದಲ್ಲಿ ಬೆಳೆದ ಜಾಲಿಕಂಟಿಗಳನ್ನು ತ್ವರಿತಗತಿಯಲ್ಲಿ ತೆರವುಗೊಳಿಸಿ ಎಂದರು.

ಜಿಲ್ಲಾಧಿಕಾರಿ ಟಿ. ಭೂಬಾಲನ್ ಮಳೆ ಕುರಿತು ಮಾಹಿತಿ ನೀಡಿದರು. ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಸಿಇಒ ರಿಷಿ ಆನಂದ, ವಿಡಿಎ ಅಧ್ಯಕ್ಷ ಕನ್ನಾನ್ ಮುಶ್ರೀಫ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net