ಎಲ್ಲೆಂದರಲ್ಲಿ ಕಸ ಎಸೆದರೆ ಹುಷಾರ್

garbage 1
Published on

ಹರೀಶ್ ಮೋಟುಕಾನ ಮಂಗಳೂರು

ರಸ್ತೆ ಬದಿ, ತೋಡು, ಹೊಳೆ ಸಹಿತ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರನ್ನು ಹಿಡಿದು ದಂಡ ವಿಧಿಸಲು ಗ್ರಾಮ ಮಟ್ಟದಲ್ಲಿ ಕಾರ್ಯಪಡೆ ರಚಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಸೂಚನೆ ನೀಡಿದ್ದಾರೆ.

ಸದ್ಯ ಗ್ರಾಪಂ ಆಡಳಿತ ಕರೊನಾ ನಿಯಂತ್ರಣದಲ್ಲಿ ಹೆಚ್ಚಿನ ಗಮನ ನೀಡುತ್ತಿದ್ದು, ಕರೊನಾ ನಿಯಂತ್ರಣಕ್ಕೆ ಬಂದ ಬಳಿಕ ಪೂರ್ಣ ಪ್ರಮಾಣದಲ್ಲಿ ಕಸ ಎಸೆಯುವವರ ಮೇಲೆ ತೀವ್ರ ನಿಗಾ ಇಡಲಿದೆ.

ಎಲ್ಲೆಂದರಲ್ಲಿ ಕಸ ಎಸೆದು ಮಲಿನಗೊಳಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಳೆದ ಬಾರಿ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮ ಮಟ್ಟದ ಕಾರ್ಯಪಡೆ ರಚಿಸಲು ಸಿಇಒ ಆದೇಶ ಮಾಡಿದ್ದಾರೆ.

ಸಿಸಿ ಕ್ಯಾಮರಾ ಅಳವಡಿಕೆ: ಗ್ರಾಮೀಣ ಭಾಗಗಳಲ್ಲಿ ಮನೆಯ ತ್ಯಾಜ್ಯವನ್ನು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ರಸ್ತೆ ಬದಿ, ತೋಡುಗಳಿಗೆ ಎಸೆಯುತ್ತಿರುವ ಪ್ರಕರಣ ಹೆಚ್ಚಾಗಿ ಕಂಡು ಬರುತ್ತಿದೆ. ಮಾಂಸದ ಅಂಗಡಿಗಳ ತ್ಯಾಜ್ಯವನ್ನು ವಾಹನಗಳಲ್ಲಿ ಕೊಂಡೊಯ್ದು ಕಾಡು ಪ್ರದೇಶದಲ್ಲಿ ರಸ್ತೆ ಬದಿ ಎಸೆಯಲಾಗುತ್ತಿದೆ. ಇನ್ನು ಮುಂದೆ ಸ್ಥಳೀಯ ಗ್ರಾಪಂ ಕಾರ್ಯಪಡೆ ಈ ಬಗ್ಗೆ ನಿಗಾ ಇಡಲಿದೆ. ಸೂಕ್ತ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ನಿಗಾ ಇಡಲು ಯೋಜನೆ ರೂಪಿಸಲಾಗಿದೆ.

ಮಂಗಳೂರಿನಲ್ಲಿ ಕ್ರಿಮಿನಲ್ ಕೇಸ್: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಸ ಪ್ರತ್ಯೇಕಿಸದೆ ರಸ್ತೆ ಬದಿ ಎಸೆಯುತ್ತಿರುವುದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದ್ದು, ಇದನ್ನು ನಿಯಂತ್ರಿಸಲು ಸಿಸಿ ಕ್ಯಾಮರಾ ಅಳವಡಿಸಿ ನಿಗಾ ಇಡಲು ಪಾಲಿಕೆ ಆಡಳಿತ ನಿರ್ಧರಿಸಿದೆ. ತಪ್ಪಿತಸ್ಥರ ವಿರುದ್ಧ ಎನ್‌ಜಿಟಿ ಮಾರ್ಗಸೂಚಿ ಹಾಗೂ ಮನಪಾ ಕಸ ನಿರ್ವಹಣೆ ಬೈಲಾ 2018ರಂತೆ ಗರಿಷ್ಠ 25 ಸಾವಿರ ರೂ. ತನಕ ದಂಡ ವಿಧಿಸಿ, ಕ್ರಿಮಿನಲ್ ಮೊಕದ್ದಮೆ ಹೂಡಲು ನಿರ್ಧಾರ ಮಾಡಲಾಗಿದೆ.

ಪಾಲಿಕೆಯ ನೈರ್ಮಲ್ಯ ನಿರೀಕ್ಷಕರು ದೈನಂದಿನ ಕಾರ್ಯ ಚಟುವಟಿಕೆಗಳ ಜತೆ ಕಸ ನಿರ್ವಹಣೆ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ಮನೆಗಳಲ್ಲಿ ಮತ್ತು ಹೆಚ್ಚು ಪ್ರಮಾಣದ ಕಸ ಉತ್ಪಾದಕರು ತಮ್ಮ ಹಂತದಲ್ಲಿಯೇ ಕಾಂಪೋಸ್ಟಿಂಗ್ ಘಟಕ ಅಳವಡಿಸಿಕೊಂಡರೆ ಅವರಿಗೆ ಆಸ್ತಿ ತೆರಿಗೆಯ ಘನತ್ಯಾಜ್ಯ ಕರದಲ್ಲಿ ಶೇ.50ರಷ್ಟು ವಿನಾಯಿತಿ ನೀಡಿ ಪ್ರೋತ್ಸಾಹಿಸಲು ಪಾಲಿಕೆ ಆಡಳಿತ ಕ್ರಮ ಕೈಗೊಂಡಿದೆ. ಉತ್ತಮ ರೀತಿಯಲ್ಲಿ ಒಣ ಹಾಗೂ ಹಸಿ ಕಸ ವಿಂಗಡಿಸಿ ನೀಡುವವರಿಗೆ ಪಾಲಿಕೆ ವತಿಯಿಂದ ‘ಬೆಸ್ಟ್ ಪ್ರಾಕ್ಟೀಸರ್’ ಎಂಬ ಪ್ರಶಂಸಾ ಪತ್ರ ನೀಡಲು ಯೋಜನೆ ರೂಪಿಸಿದೆ.

ಗ್ರಾಮೀಣ ಭಾಗದಲ್ಲಿ ರಸ್ತೆ ಬದಿ, ತೋಡುಗಳಿಗೆ ಕಸ ಎಸೆಯುವವರನ್ನು ಪತ್ತೆ ಮಾಡಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಕಾರ್ಯಪಡೆ ರಚಿಸುವಂತೆ ಎಲ್ಲ ಗ್ರಾಪಂಗಳಿಗೆ ಆದೇಶ ನೀಡಲಾಗಿದೆ. ಈಗಾಗಲೇ ಕಾರ್ಯಪಡೆ ರಚನೆಯಾಗಿದ್ದು, ಶೀಘ್ರದಲ್ಲೇ ಅನುಷ್ಠಾನಗೊಳ್ಳಲಿದೆ. ಡಾ.ಕುಮಾರ್ ಸಿಇಒ, ದ.ಕ ಜಿಪಂ ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವವರನ್ನು ಪತ್ತೆ ಮಾಡಲು ಸಿಸಿ ಕ್ಯಾಮರಾ ಅಳವಡಿಸಲು ನಿರ್ಧರಿಸಲಾಗಿದೆ. ಸಾರ್ವಜನಿಕರು ಇಂತಹ ವ್ಯಕ್ತಿಗಳ ಬಗ್ಗೆ 9449007722ಗೆ ವಾಟ್ಸ್‌ಆ್ಯಪ್ ಮೂಲಕ ಸ್ಥಳದ ವಿವರದೊಂದಿಗೆ ದೂರು ನೀಡಬಹುದು. ಪ್ರೇಮಾನಂದ ಶೆಟ್ಟಿ, ಮೇಯರ್, ಮನಪಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net