ಹೊರ ಬಂದರೆ ಹುಷಾರ್!

28 vikram 1 (SP)
Published on

ಧಾರವಾಡ: ಕರೊನಾ ವೈರಸ್ ಹರಡುವಿಕೆ ತಡೆಗಟ್ಟಲು ಹೊರಡಿಸಿರುವ ಲಾಕ್​ಡೌನ್ ಆದೇಶ ಪಾಲನೆ ಮಾಡದ ಜನರಿಗೆ ಬುದ್ಧಿ ಕಲಿಸುವಲ್ಲಿ ಪೊಲೀಸರು ಹೈರಾಣಾಗಿದ್ದಾರೆ. ನಗರ ಪ್ರದೇಶದಲ್ಲಿ ಸುಖಾ ಸುಮ್ಮನೆ ಹೊರ ಬರುವ ಜನರಿಗೆ ಲಾಠಿ ರುಚಿ ತೋರಿಸಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ಹಲವು ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.

ಲಾಕ್​ಡೌನ್ ಆದೇಶ ಹೊರ ಬಿದ್ದ ದಿನದಿಂದಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕ ಕಟಿಯಾರ್, ವಿವಿಧ ಗ್ರಾಮಗಳಿಗೆ ತೆರಳಿ, ಇರುವಂತೆ ಮನವಿ ಮಾಡುತ್ತಿದ್ದಾರೆ. ಒಂದು ವೇಳೆ ಹೊರ ಬಂದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಇದರ ಜತೆಯಲ್ಲೇ ಗ್ರಾಮದಲ್ಲಿ ಯಾವುದೇ ಕಾರಣಕ್ಕೂ ಗುಂಪು ಸೇರಿವಂತಿಲ್ಲ ಹಾಗೂ ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು. ಮನೆ ಸುತ್ತಲಿನ ಆವರಣವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದು ಮನವಿ ಮಾಡುತ್ತಿದ್ದಾರೆ.

ಈ ಕುರಿತು ಮಾತನಾಡಿದ ಅವರು, ‘ಸುಖಾಸುಮ್ಮನೆ ಮನೆಯಿಂದ ಹೊರ ಬರದಂತೆ ಮನವಿ ಮಾಡಲಾಗಿದೆ. ಆದಾಗ್ಯೂ ಕೆಲಸವಿಲ್ಲದೆ ಓಣಿ ಓಣಿ ತಿರುಗಾಡುತ್ತಿದ್ದ ಜನರಿಂದ 49 ಬೈಕ್​ಗಳನ್ನು ಸೀಜ್ ಮಾಡಿ, 7000 ರೂ. ದಂಡ ವಸೂಲಿ ಮಾಡಲಾಗಿದೆ. ಇಷ್ಟೇ ಅಲ್ಲದೆ, ಇಬ್ಬರ ಮೇಲೆ ಪ್ರಕರಣ ಸಹ ದಾಖಲಿಸಲಾಗಿದೆ ಎಂದರು.

ಅರ್ಥ ಮಾಡಿಕೊಳ್ಳಿ: ಸರ್ಕಾರ ಯಾವ ಕಾರಣಕ್ಕೆ ಈ ಆದೇಶ ಹೊರಡಿಸಿದೆ ಎಂದು ಅರಿತು ಮನೆಯಲ್ಲಿರಬೇಕು. ದಿನದ 24 ಗಂಟೆ ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದೇವೆ. ಯಾವ ಸಿಬ್ಬಂದಿಯೂ ಗ್ರಾಮೀಣ ಜನರ ಮೇಲೆ ಲಾಠಿ ಬೀಸಿಲ್ಲ. ಜನ ಪೊಲೀಸರ ತೊಂದರೆ ಅರ್ಥ ಮಾಡಿಕೊಳ್ಳಬೇಕು. ಜನರಿಗೆ ಅಗತ್ಯ ವಸ್ತುಗಳನ್ನು ತಲುಪಿಸುವ ವ್ಯವಸ್ಥೆ ಸಹ ಆಗಿದೆ. ಹೀಗಾಗಿ ಯಾರೂ ಅನವಶ್ಯಕವಾಗಿ ಹೊರಗೆ ಓಡಾಡಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕ ಕಟಿಯಾರ್ ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net