ಅನಧಿಕೃತ ಕಟ್ಟಡಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

peoples problem
Published on

ಬೆಂಗಳೂರು: ನಗರದಲ್ಲಿ ಅನಧಿಕೃತ ಕಟ್ಟಡಗಳನ್ನು ನಿರ್ಮಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಧಿಕಾರಿ ವರ್ಗಕ್ಕೆ ಸೂಚನೆ ನೀಡಿದರು.

ಪೂರ್ವ ವಲಯದಲ್ಲಿ ಬುಧವಾರ ನಡೆದ ‘ಮುಖ್ಯ ಆಯುಕ್ತರ ನಡೆ ವಲಯದ ಕಡೆ’ ಕಾರ್ಯಕ್ರಮದಲ್ಲಿ ನಾಗರಿಕರ ಅಹವಾಲು ಆಲಿಸಿದ ವೇಳೆ ಮಾತನಾಡಿದ ಅವರು, ಅನಧಿಕೃತ ಕಟ್ಟಡ ನಿರ್ಮಾಣ ಮಾಡುವವರಿಗೆ ನೋಟಿಸ್ ಜಾರಿ ಮಾಡಿ ಕಾಲಮಿತಿಯೊಳಗಾಗಿ ಅನಧಿಕೃತ ಭಾಗಗಳನ್ನು ತೆರವುಗೊಳಿಸಬೇಕು. ಈ ವಿಚಾರದಲ್ಲಿ ಯಾರ ಮುಲಾಜಿಗು ಒಳಗಾಗದೆ ಕರ್ತವ್ಯ ನಿಭಾಯಿಸಬೇಕು ಎಂದು ಕಟ್ಟಪ್ಪಣೆ ಮಾಡಿದರು.

ಸಿ.ವಿ. ರಾಮನ್‌ನಗರದ ಕಸ್ತೂರಿನಗರ ವ್ಯಾಪ್ತಿಯ ರಸ್ತೆಬದಿ ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಹೆಚ್ಚಿನ ದೂರುಗಳು ಬಂದಿವೆ. ಇದರಿಂದ ನಾಗರಿಕರು ುಟ್‌ಪಾತ್‌ನಲ್ಲಿ ಓಡಾಡದಂತಹ ಸ್ಥಿತಿ ನಿರ್ಮಾಣವಾಗಿದೆ ಎಂಬ ಆಕ್ಷೇಪವೂ ಇದೆ. ಹಾಗಾಗಿ ಒತ್ತುವರಿ ಭಾಗಗಳನ್ನು ತೆರವುಗೊಳಿಸಲಾಗುತ್ತಿದೆ. ುಟ್‌ಪಾತ್‌ಗಳಲ್ಲಿ ಸರಾಗ ಓಡಾಟಕ್ಕೆ ಅವಕಾಶವಾಗಲು ಶಾಶ್ವತವಾಗಿ ಸ್ಥಾಪಿಸಿರುವ ಪೆಟ್ಟಿಗೆಗಳು ಇಲ್ಲದಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ತಿಳಿವಳಿಕೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಕಾಕ್ಸ್‌ಟೌನ್ ಮಾರುಕಟ್ಟೆ ತೆರೆಯಲು ಕ್ರಮ:

ಪಾಲಿಕೆಯಿಂದ ಕಾಕ್ಸ್‌ಟೌನ್‌ನಲ್ಲಿ ಮಾರುಕಟ್ಟೆ ನಿರ್ಮಿಸಿದ್ದು, ಅದನ್ನು ಇನ್ನೂ ತೆರೆದಿರುವುದಿಲ್ಲ. ಈ ವಿಚಾರದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಜತೆಗೆ ಪೂರ್ವ ವಲಯ ವ್ಯಾಪ್ತಿಯಲ್ಲಿ ಅಪಘಾತ ಸ್ಥಳಗಳನ್ನು ಗುರುತಿಸಿ, ಆ ಸ್ಥಳಗಳಲ್ಲಿ ಸಂಚಾರ ಪೊಲೀಸ್ ಅಧಿಕಾರಿಗಳ ಸಲಹೆ ಮೇರೆಗೆ ರಸ್ತೆ ಉಬ್ಬುಗಳನ್ನು ನಿರ್ಮಿಸಿ ಅಪಘಾತ ನಿಯಂತ್ರಿಸಲು ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಅಹವಾಲು ಆಲಿಕೆ ವೇಳೆ ಸಾರ್ವಜನಿಕರಿಂದ 66 ದೂರುಗಳನ್ನು ಸ್ವೀಕರಿಸಲಾಯಿತು. ಈ ದೂರುಗಳ ಸಮಸ್ಯೆ ಅರಿತು ಕಾಲಮಿತಿಯೊಳಗೆ ಬಗೆಹರಿಸುವಂತೆ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚಿಸಿದರು.

ಕಾರ್ಯಕ್ರಮದಲ್ಲಿ ಪಾಲಿಕೆಯ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್, ವಲಯ ಜಂಟಿ ಆಯುಕ್ತೆ ಸರೋಜಾ, ಮುಖ್ಯ ಅಭಿಯಂತರ ಸುಗುಣಾ, ಉಪ ಆಯುಕ್ತ ರಾಜು, ಕಾರ್ಯಪಾಲಕ ಅಭಿಯಂತರರು, ಆರೋಗ್ಯಾಧಿಕಾರಿ ಸೇರಿ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

ಅಹವಾಲು ಆಲಿಕೆ ವೇಳೆ ಕಂಡ ಪ್ರಮುಖ ಸಮಸ್ಯೆಗಳಿವು:

* ಖಾಲಿ ಜಾಗದಲ್ಲಿ ತ್ಯಾಜ್ಯ ಬಿಸಾಡುವ ಪ್ರಕರಣಗಳು ಹೆಚ್ಚುತ್ತಿದ್ದು, ಅದನ್ನು ನಿಯಂತ್ರಿಸಬೇಕು.

* ಸದಾನಂದನಗರದಲ್ಲಿ ರಸ್ತೆ ಡಾಂಬರೀಕರಣ ಮಾಡಲು ಮನವಿ.

* ಹೈಕೋರ್ಟ್ ಆವರಣದಲ್ಲಿ ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಕಲ್ಪಿಸಿ.

* ರಸ್ತೆ ಬದಿ ಚರಂಡಿಗಳಲ್ಲಿ ಹೂಳೆತ್ತಿ ಸ್ವಚ್ಛತೆ ಕಾಪಾಡಬೇಕು.

* ಅನಧಿಕೃತ ರಸ್ತೆ ಅಗೆತ ಪ್ರಕರಣಗಳನ್ನು ನಿಯಂತ್ರಿಸಬೇಕು.

* ವಿವಿಧ ರಸ್ತೆಗಳಲ್ಲಿ ವೇಗ ತಗ್ಗಿಸಲು ರಸ್ತೆ ಉಬ್ಬುಗಳನ್ನು ನಿರ್ಮಿಸಬೇಕು.

* ಸ್ಕೈವಾಕ್‌ಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net