

ಹೊಸಕೋಟೆ : ನಗರದಲ್ಲಿ ಇತ್ತೀಚೆಗೆ ರಸ್ತೆಬದಿ ಕಸ ಹಾಕುವ ಪ್ರವೃತ್ತಿ ಹೆಚ್ಚಾಗುತ್ತಿರುವ ಹಿನ್ನೆಲೆ ಪೊಲೀಸರು ಕ್ರಮದ ಎಚ್ಚರಿಕೆ ರವಾನಿಸಿದ್ದಾರೆ. ಸಾರ್ವಜನಿಕರು, ಕೋಳಿ ಅಂಗಡಿ ಮಾಲೀಕರು, ರಸ್ತೆ ಬದಿ ಹೋಟೆಲ್, ಬಿರ್ಯಾನಿ ಹೋಟೆಲ್, ತರಕಾರಿ, ಹೂವಿನ ಮಂಡಿಯವರು ಹಲವರು ರಸ್ತೆಯ ಬದಿ ಕಸ ಹಾಕುತ್ತಿರುವುದನ್ನು ಮನಗಂಡ ಹೊಸಕೋಟೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಬಿ.ಟಿ.ಗೋವಿಂದ್ ಅವರು ರಸ್ತೆಯಲ್ಲಿ ಕಸ ಹಾಕಿದವರ ವಿರುದ್ಧ ಬಿಎನ್ಎಸ್ 280 ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರ ಹಾಗೂ ನಗರಕ್ಕೆ ಸಂಪರ್ಕಿಸುವ ಯಾವುದೇ ರಸ್ತೆಯಲ್ಲಿ ಕಸ ಸುರಿಯುವವರನ್ನು ಕಂಡರೆ ತಕ್ಷಣವೇ ಅಂತಹವರ ವಿರುದ್ಧ ಕಾನೂನು ಕ್ರಮ, ವಾಹನ ಜಪ್ತಿ ಹಾಗೂ ಯಾವುದೇ ಹೋಟೆಲ್ ಅಂಗಡಿಯಾಗಿದ್ದರೆ ಅವರ ಪರವಾನಗಿ ರದ್ದು ಮಾಡಲಾಗುವುದು ಎಂದರು.
ನಗರದ ಖಾಸಗಿ ಮನೆ, ಕಚೇರಿಯ ಸಿಸಿ ಕ್ಯಾಮರಾಗಳ ಬಗ್ಗೆ ಮಾಹಿತಿ ಪಡೆಯಲಾಗಿದ್ದು, ರಸ್ತೆಗಳಲ್ಲಿ ಅತಿ ಹೆಚ್ಚು ಕಸ ಸಂಗ್ರಹವಾಗುವ ಭಾಗಗಳಲ್ಲಿ ಹೊಸದಾಗಿ ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗುವುದು. ಒಂದು ವೇಳೆ ರಸ್ತೆಯಲ್ಲಿ ಕಸ ಹಾಕುವುದು ಸಾರ್ವಜನಿಕರ ಗಮನಕ್ಕೆ ಬಂದಲ್ಲಿ ಕೂಡಲೇ ವಿಡಿಯೋ ಮಾಡಿ ಪೊಲೀಸರಿಗೆ ಅಥವಾ ನಗರಸಭೆ ಅಧಿಕಾರಿಗಳಿಗೆ ಮಾಹಿತಿ ನೀಡಿದಲ್ಲಿ ಅಂತಹವರ ವಿರುದ್ಧವೂ ಕ್ರಮಕ್ಕೆ ಮುಂದಾಗಲಿದ್ದೇವೆ ಎಂದರು. ಪ್ರತಿದಿನ ಮನೆ ಬಳಿ ಬರುವ ಕಸದ ಗಾಡಿಗೆ ಕಸ ಹಾಕುವ ಮೂಲಕ ನಗರವನ್ನು ಸ್ವಚ್ಚವಾಗಿರಿಸಿಕೊಳ್ಳುವುದರ ಜತೆಗೆ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಯತ್ನಿಸಬೇಕು ಎಂದರು.