

ವಿಜಯವಾಣಿ ಸುದ್ದಿಜಾಲ ಉಡುಪಿ
ಜಿಲ್ಲೆಯಲ್ಲಿ ಕಳೆದ 15 ದಿನದಿಂದ ಗಾಂಜಾ, ಡ್ರಗ್ಸ್ ಮಾರಾಟ ಹಾಗೂ ಸೇವನೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 35 ಪ್ರಕರಣ ದಾಖಲಾಗಿದ್ದು, 35 ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಹಾಗೂ ಜಿಲ್ಲಾ ಡ್ರಗ್ ಡಿಸ್ಪೋಸಲ್ ಕಮಿಟಿಯ ಅಧ್ಯಕ್ಷ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ.
ಕುಂದಾಪುರ ಠಾಣೆಯಲ್ಲಿ 7 ಪ್ರಕರಣ, ಮಣಿಪಾಲ ಠಾಣೆ 6, ಕಾರ್ಕಳ ನಗರ ಮತ್ತು ಮಲ್ಪೆ ಠಾಣೆ ತಲಾ 5, ಉಡುಪಿ ನಗರ ಪೊಲೀಸ್ ಠಾಣೆ 4, ಕಾಪು ಮತ್ತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ತಲಾ 2, ಹಿರಿಯಡ್ಕ, ಕೊಲ್ಲೂರು, ಕೋಟ ಮತ್ತು ಶಿರ್ವಾ ಠಾಣೆಗಳಲ್ಲಿ ತಲಾ 1 ಪ್ರಕರಣ ದಾಖಲಾಗಿದ್ದು 35 ಜನರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಹಾಯಕ ಪೊಲೀಸ್ ಅಧೀಕ್ಷಕಿ ಡಾ. ಹರ್ಷಾ ಪ್ರಿಯಂವದಾ (ಐಪಿಎಸ್), ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಭು ಡಿ.ಟಿ. ಹಾಗೂ ಇನ್ನಿತರ ಪೊಲೀಸ್ ಅಧಿಕಾರಿಗಳು ಇದ್ದರು.
ಉಡುಪಿ ತಾಲೂಕು 80 ಬಡಗಬೆಟ್ಟು ಗ್ರಾಮದ ರಾಜೀವ ನಗರದಲ್ಲಿರುವ ಮನೆಯೊಂದರಲ್ಲೇ ಗಾಂಜಾ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮಣಿಪಾಲ ಠಾಣೆಯ ಉಪ ನಿರೀಕ್ಷಕಿ ಅಕ್ಷಯಕುಮಾರಿ ಎಸ್.ಎನ್. ಹಾಗೂ ಸಿಬ್ಬಂದಿ ಯುವಕನೋರ್ವನನ್ನು ಬಂಧಿಸಿದ್ದಾರೆ. ಆಂಧ್ರಪ್ರದೇಶ ರಾಜ್ಯದ ರಂಗರೆಡ್ಡಿ ಜಿಲ್ಲೆಯ ಬೊಡುಪ್ಪಲ್ ತಾಲೂಕಿನ ಮಾರುತಿ ನಗರದ ಸೀತಾರಾಮ ವಿಜಯಭಾಸ್ಕರ ರೆಡ್ಡಿ ತೌಟರೆಡ್ಡಿ (21) ಬಂಧಿತ ಯುವಕ. ಮೇಘಾಲಯದಿಂದ ಆನ್ಲೈನ್ ಮೂಲಕ ಗಾಂಜಾ ಬುಕ್ ಮಾಡಿ, ಅಂಚೆ ಮೂಲಕ ತರಿಸಿಕೊಂಡು ಮಣಿಪಾಲ ಹಾಗೂ ಉಡುಪಿಯಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಪರಿಚಯಸ್ಥರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹಣ ಗಳಿಸುತ್ತಿದ್ದನು. ಯುವಕನ ಬಳಿ ಇದ್ದ 1 ಕೆಜಿಗೂ ಹೆಚ್ಚು ಗಾಂಜಾ, ಗಾಂಜಾ ಎಳೆಯುವ 2 ಬಾಂಗ್, 1 ಐಫೋನ್, 3,180 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಕಾಪು ತಾಲೂಕು ಬೆಳಪು ಗ್ರಾಮದ ಬೆಳಪು ಇಂಡಸ್ಟ್ರಿಯಲ್ ಏರಿಯಾ ಕ್ರಾಸ್ ರಸ್ತೆ ಬಳಿ ಗುರುವಾರ (ಅ.9) ಗಾಂಜಾ ಮಾರಾಟ ಮಾಡುತ್ತಿದ್ದ ಉಡುಪಿ ಕೊಡವೂರು ಗ್ರಾಮ ಲಕ್ಷ್ಮೀ ನಗರದ ಅಭಿಷೇಕ ಉದಯ ಪಾಲನ್ (30), ಉಪ್ಪೂರು ಗ್ರಾಮ ಕೊಳಲಗಿರಿಯ ಲಕ್ಷ್ಮೀ ನಗರದ ಆರ್.ಶಾಶ್ವತ್ (24) ಎಂಬವರನ್ನು ಬಂಧಿಸಲಾಗಿದೆ. ಅಂದಾಜು 5 ಸಾವಿರ ರೂ. ಬೆಲೆಯ 115.44 ಗ್ರಾಂ ಗಾಂಜಾ, ಡಿಜಿಟಲ್ ಯಂತ್ರ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ವಶಪಡಿಸಿಕೊಳ್ಳಲಾಗಿದೆ. ಖಚಿತ ಮಾಹಿತಿ ಮೇರೆಗೆ ಶಿರ್ವ ಪೊಲೀಸ್ ಠಾಣೆಯ ಉಪನಿರೀಕ್ಷಕ ಮಂಜುನಾಥ ಮರಬದ ಅವರು ಸಿಬ್ಬಂದಿಯೊಂದಿಗೆ ದಾಳಿ ನಡೆಸಿದ್ದರು. ಶಿರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ನಗರ ಠಾಣೆ, ಸೆನ್ ಠಾಣೆ, ಮಲ್ಪೆ, ಪಡುಬಿದ್ರಿ, ಶಿರ್ವಾ, ಕಾರ್ಕಳ ನಗರ ಹಾಗೂ ಮಣಿಪಾಲ ಠಾಣೆಯಲ್ಲಿ 2021ರಿಂದ 2025ರ ವರೆಗಿನ ಒಟ್ಟು 10 ಪ್ರಕರಣಗಳಲ್ಲಿ ವಶಕ್ಕೆ ಪಡೆದಿದ್ದ ಡ್ರಗ್ಸ್ ಹಾಗೂ ಗಾಂಜಾವನ್ನು ನ್ಯಾಯಾಲಯದ ಆದೇಶದಂತೆ ನಾಶಗೊಳಿಸಿದ್ದೇವೆ. 2021ರ ಪಡುಬಿದ್ರಿ ಠಾಣೆಯ ದಾಖಲಾಗಿದ್ದ ಪ್ರಕರಣವು ಸಜೆಯಲ್ಲಿ ಮುಕ್ತಾಯಗೊಂಡಿದೆ. ಆರೋಪಿ ಅಬ್ದುಲ್ ರಹಿಮಾನ್ ಎಂಬಾತನಿಗೆ ನ್ಯಾಯಾಲಯವು 8 ಸಾವಿರ ರೂ. ದಂಡ ವಿಧಿಸಿ ಶಿಕ್ಷೆ ಪ್ರಕಟಿಸಿದೆ. 2025ರ ಮಣಿಪಾಲ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ತನಿಖೆಯಲ್ಲಿದ್ದು, ಉಳಿದೆಲ್ಲವೂ ಕೋರ್ಟ್ನಲ್ಲಿ ವಿಚಾರಣೆಯಲ್ಲಿದೆ. | ಹರಿರಾಂ ಶಂಕರ್. ಉಡುಪಿ ಎಸ್ಪಿ