

ವಿಜಯವಾಣಿ ಸುದ್ದಿಜಾಲ ಕುಂದಾಪುರ ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ವೇತನ ಹೆಚ್ಚಳವಾಗಿದ್ದು, ವೇತನ ನೀಡುವ ಸಂದರ್ಭ ಲಂಚ ಪಡೆಯಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಶಾಸಕ ಎ.ಕಿರಣ್‌ಕುಮಾರ್ ಕೊಡ್ಗಿ ತಾಕೀತು ಮಾಡಿದರು. ಕುಂದಾಪುರ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ನಡೆದ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿದರು. ಕೆಡಿಪಿ ಸಭೆಗೆ ಬರಲು ಅಸಾಧ್ಯವಾದವರು ಲಿಖಿತ ರೂಪದಲ್ಲಿ ತಿಳಿಸಬೇಕು. ತಾಲೂಕು ಮಟ್ಟದ ಕೆಡಿಪಿ ತ್ರೈಮಾಸಿಕ ಸಭೆಗೆ ಅಧಿಕಾರಿಗಳು ಹಾಜರಾಗುತ್ತಿರುವುದು ಕಡಿಮೆಯಾಗುತ್ತಿದೆ. ಗ್ರಾಪ. ಕೆಡಿಪಿ ಸಭೆಗಳು ಸಂಪೂರ್ಣವಾಗಿ ಕಡೆಗಣನೆಯಾಗುತ್ತಿದೆ ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದರು. ಕುಂದಾಪುರ ಸೌಹಾರ್ದ ಸೊಸೈಟಿಯಲ್ಲಿ ಅವ್ಯವಹಾರ ಕುರಿತು ದೂರು ಸ್ವೀಕರಿಸಿದ್ದರಿಂದ ಪರಿವೀಕ್ಷಿಸಲಾಗಿದೆ. ಶೇ.85 ಆಧಾರರಹಿತ ಸಾಲ ನೀಡಲಾಗಿದ್ದು, 45 ಕೋಟಿ ರೂ. ವಸೂಲಿ ಮಾಡದೆ ಸುಸ್ತಿ ಆಗಿದೆ. ಅಷ್ಟೂ ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸೌಹಾರ್ದ ಸಹಕಾರಿ ಸಂಘಗಳ ಜಿಲ್ಲಾ ನಿಬಂಧಕ ವಿಜಯ್ ತಿಳಿಸಿದರು. ಮೀನುಗಾರರಿಗೆ ಮನೆಗಳ ಮಂಜೂರಾತಿಗೆ ಅನುದಾನ ಬರುತ್ತಿಲ್ಲ, ಗಂಗೊಳ್ಳಿ ಮೀನುಗಾರರ ಸಹಕಾರಿ ಸಂಘದಲ್ಲಿ ಪರಿಶಿಷ್ಟ ಜಾತಿಯವರಿಗೆ ಎ ವರ್ಗದ ಸದಸ್ಯತ್ವ ನೀಡಲಾಗುತ್ತಿಲ್ಲ ಎಂಬ ಆರೋಪ ಕೇಳಿಬಂತು.
ಕೇಂದ್ರ ಉಳಿತಾಯ ಪರಿಹಾರ ಯೋಜನೆ ಕುರಿತು ಮೀನುಗಾರರಿಗೆ ಮಾಹಿತಿ ನೀಡಿ ಹೆಚ್ಚಿನ ಗಮನ ಹರಿಸಬೇಕು. ಮೀನುಗಾರಿಕೆಗೆ ತೆರಳುವ ಸಂದರ್ಭ ಲೈಫ್‌ಜಾಕೆಟ್ ಧರಿಸುವಂತೆ ಜಾಗೃತಿ ಮೂಡಿಸಬೇಕು ಎಂದು ಶಾಸಕರಾದ ಕಿರಣ್‌ಕುಮಾರ್ ಕೊಡ್ಗಿ ಹಾಗೂ ಗುರರಾಜ್ ಗಂಟಿಹೊಳೆ ಸೂಚನೆ ನೀಡಿದರು. ತಾಲೂಕು ಆರೋಗ್ಯ ಅಧಿಕಾರಿ ಡಾ.ಪ್ರೇಮಾನಂದ, ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಉದಯಕುಮಾರ್ ಶೆಟ್ಟಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ.ರವಿಕುಮಾರ್ ಹುಕ್ಕೇರಿ, ಕುಂದಾಪುರ ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್, ನಾಮನಿರ್ದೇಶಿತ ಸದಸ್ಯ ರಮೇಶ ಶೆಟ್ಟಿ, ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ ಇದ್ದರು.
ಪೊಲೀಸ್ ಇಲಾಖೆ ಕೆಡಿಪಿ ತ್ರೈಮಾಸಿಕ ಸಭೆಯನ್ನು ಸಂಪೂರ್ಣ ಕಡೆಗಣಿಸುತ್ತಿದೆ. ಪೊಲೀಸ್ ಇಲಾಖೆ ಕೆಡಿಪಿ ಸಭೆಯನ್ನು ಗೌರವಿಸಬೇಕು. ಗಂಗೊಳ್ಳಿ ಪೊಲೀಸ್ ಹೊರಠಾಣೆಯಲ್ಲಿ ಸಿಬ್ಬಂದಿ ನಿಯೋಜಿಸಬೇಕು ಎಂದು ಶಾಸಕ ಗಂಟಿಹೊಳೆ ಬೈಂದೂರು ವೃತ್ತನಿರೀಕ್ಷಕ ಸವಿತ್ರತೇಜ ಅವರನ್ನು ತರಾಟೆಗೆ ತೆಗೆದುಕೊಂಡರು.
ಬಿಸಿಎಂ ಇಲಾಖೆ ಹಾಸ್ಟೆಲ್‌ಗಳಿಗೆ ದಾಖಲಾತಿ ಮಿತಿಗಿಂತ ಹೆಚ್ಚಿನ ಅರ್ಜಿಗಳು ಬಂದಿವೆ. ನಗರದಲ್ಲಿ ಇನ್ನೂ 2, ಕೆದೂರಿನಲ್ಲಿ ಒಂದು ಹಾಸ್ಟೆಲ್‌ಗೆ ಬೇಡಿಕೆ ಇದೆ. 15 ಹಾಸ್ಟೆಲ್‌ಗಳಲ್ಲಿ 3 ವಾರ್ಡನ್‌ಗಳಷ್ಟೇ ಇದ್ದಾರೆ ಎಂದು ಅಧಿಕಾರಿ ಆಶಾದೇವಿ ನಾಯ್ಕ ಮನವಿ ಮಾಡಿದರು. ಹೆಚ್ಚುವರಿ ಸೀಟ್‌ಗೆ ಬೇಡಿಕೆ ಸಲ್ಲಿಸಲಾಗುವುದು. ಹಾಸ್ಟೆಲ್‌ಗಳಲ್ಲಿ ವಾರ್ಡನ್ ಕೊರತೆ ನೀಗಿಸುವುದಕ್ಕಾಗಿ ಸರ್ಕಾರಿ ಕಾಲೇಜಿನ ಉಪನ್ಯಾಸಕರನ್ನು ಬಳಸಲಾಗುತ್ತಿದೆ. ಬೈಂದೂರು ಹಾಗೂ ಗಂಗೊಳ್ಳಿ ಭಾಗದಲ್ಲೂ ಈ ಕುರಿತು ಪ್ರಯತ್ನಿಸಿ ಎಂದು ಶಾಸಕರಿಬ್ಬರೂ ಸೂಚನೆ ನೀಡಿದರು.
ಹವಾಮಾನ ಆಧರಿತ ಬೆಳೆ ವಿಮೆ ನೋಂದಣಿಗೆ ದ.ಕ. ಜಿಲ್ಲೆಗೆ 1 ತಿಂಗಳ ಕಾಲಾವಕಾಶ, ಉಡುಪಿಗೆ 5 ರಿಂದ 10 ದಿನ ಮಾತ್ರ ಇದೆ. ಪ್ರತೀ ಬಾರಿ ಈ ತಾರತಮ್ಯ ಸಹಿಸಲಸಾಧ್ಯ ಎಂದು ಶಾಸಕ ಕೊಡ್ಗಿ ಆಕ್ಷೇಪಿಸಿದರು. ಕೊಳೆ ರೋಗದ ಕುರಿತು ಶರತ್‌ಕುಮಾರ್ ಶೆಟ್ಟಿ ಗಮನ ಸೆಳೆದರು. ಕೊರಗ ಕುಟುಂಬಗಳಿಗೆ ಆಹಾರಧಾನ್ಯ ವಿತರಿಸುವ ಕುರಿತು ಮಲ್ಯಾಡಿ ಶಿವರಾಮ ಶೆಟ್ಟಿ ಪ್ರಶ್ನಿಸಿದರು.