

ಕಂಪ್ಲಿ: ಧ್ಯಾನದಿಂದ ಮಾತ್ರ ಹೃದಯ ಪರಿವರ್ತನೆ ಸಾಧ್ಯವಿದ್ದು, ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಇಲ್ಲಿನ ಪತಂಜಲಿ ಯೋಗ ಸಮಿತಿ ತಾಲೂಕು ಪ್ರಭಾರ ಡಿ.ಮೌನೇಶ್ ಹೇಳಿದರು.
ಇಲ್ಲಿನ ಶಾರದಾ ಶಾಲೆ ಆವರಣದಲ್ಲಿ ಪತಂಜಲಿ ಯೋಗ ಸಮಿತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಮೊದಲ ವಿಶ್ವ ಧ್ಯಾನ ದಿನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಒತ್ತಡರಹಿತ ಜೀವನ ಅಸಾಧ್ಯ ಎನ್ನುವಂತಾಗಿದ್ದು, ಧ್ಯಾನ ಅಭ್ಯಾಸದಿಂದ ಮಾತ್ರ ಒತ್ತಡ ಸಹಿಸುವ ಗುಣಗಳಿಸಲು ಸಾಧ್ಯ. ಸಾಮೂಹಿಕ ಧ್ಯಾನ ಪದ್ಧತಿಯಿಂದ ಭಾವೈಕ್ಯತೆ, ಸಮಗ್ರತೆ, ಸಮನ್ವಯತೆ ಮತ್ತು ಭ್ರಾತೃತ್ವ ಭಾವಗಳಿಸಲು ಸಾಧ್ಯ. ಧನಾತ್ಮಕ ಮನೋಭಾವ, ಜೀವನ ಪ್ರೀತಿಯನ್ನು ಪ್ರೇರೇಪಿಸಲು ಧ್ಯಾನ ಮಾಡಬೇಕು ಎಂದರು.
ಯೋಗಪಟು ಕಾರೇಮಂಗಿ ತಿಪ್ಪೇಸ್ವಾಮಿ ಮಾತನಾಡಿ, ಪತಂಜಲಿ ಯೋಗ ಸಮಿತಿಯಿಂದ ಉಚಿತ ಧ್ಯಾನ, ಯೋಗಾಭ್ಯಾಸ ನಿತ್ಯ ಶಿಬಿರ ನಡೆಯುತ್ತಿದ್ದು ಜನರು ಸದ್ಬಳಕೆ ಮಾಡಿಕೊಳ್ಳಬೇಕಿದೆ. ಧ್ಯಾನ, ಯೋಗಾಭ್ಯಾಸದಿಂದ ಖರ್ಚುರಹಿತ ಆರೋಗ್ಯಗಳಿಸಬಹುದು ಎಂದರು.
ಪತಂಜಲಿ ಯೋಗ ಸಮಿತಿ ನಗರ ಅಧ್ಯಕ್ಷ ಟಿ.ಕೊಟ್ರೇಶ್, ಮಹಿಳಾ ಪ್ರಭಾರ ರತ್ನಮ್ಮ, ಸಾಧಕರಾದ ಡಾ.ಜಂಭುನಾಥಗೌಡ, ಕೆ.ನಾಗಪ್ಪ, ಸುಭಾಶ್ಚಂದ್ರ ಬೋಸ್, ಮೋಹನ್‌ರಾವ್, ರಾಘವರೆಡ್ಡಿ, ಇಟಗಿ ವಿರೂಪಾಕ್ಷಿ, ಭೀಮನಗೌಡ, ಇಲ್ಲೂರು ಶ್ರೀನಿವಾಸ್, ನಾಗರತ್ನ, ಭವಾನಿ, ವಿಜಯಲಕ್ಷ್ಮೀ, ಸತ್ಯನಾರಾಯಣ, ಹನುಮಂತರೆಡ್ಡಿ ಇತರರಿದ್ದರು.