

ಚಿಕ್ಕಮಗಳೂರು: ರಾಜ್ಯದ ಹಿಂದುಳಿದ ವರ್ಗದವರನ್ನು ಮುಖ್ಯವಾಹಿನಿಗೆ ತರಲು ಬಿಜೆಪಿ ಒಬಿಸಿ ಮೋರ್ಚಾ ಒತ್ತು ನೀಡುತ್ತಿದ್ದು, ಸಮುದಾಯ ಹಾಗೂ ಸರ್ಕಾರದ ನಡುವೆ ಸಂಪರ್ಕ ಸೇತುವಾಗಿ ಕಾರ್ಯ ನಿರ್ವಹಿಸಲಿದೆ ಎಂದು ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ನೆ.ಲ.ನರೇಂದ್ರ ಬಾಬು ತಿಳಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಿಂದುಳಿದ ವರ್ಗಗಳ ಸಮುದಾಯದ ಅಭಿವೃದ್ಧಿ ಸಲುವಾಗಿ ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿವೆ. ಪರಿಶಿಷ್ಟ ಜಾತಿ, ವರ್ಗಗಳ ಆಯೋಗಕ್ಕೆ ನೀಡಲಾಗಿದ್ದ ಸಾಂವಿಧಾನಿಕ ನೆಲೆಯನ್ನು ಪ್ರಧಾನಿ ಮೋದಿ ಒಬಿಸಿ ಆಯೋಗಕ್ಕೂ ಕಲ್ಪಿಸಿದ್ದಾರೆ. ಈಗ ಆರ್ಟಿಕಲ್ 340 ರ ಮೂಲಕ ಹಲವು ಸೌಲಭ್ಯಗಳನ್ನು ನೀಡುವುದರ ಜತೆಗೆ ಹಿಂದುಳಿದ ವರ್ಗದವರ ಅಭ್ಯುದಯಕ್ಕೆ ಶ್ರಮಿಸಲಾಗುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕೌಶಲ್ಯಾಭಿವೃದ್ಧಿ ತರಬೇತಿ:
ರಾಜ್ಯದ ಜನಸಂಖ್ಯೆಯಲ್ಲಿ ಒಬಿಸಿ ಸಮುದಾಯಕ್ಕೆ ಸೇರಿದ ಶೇ.60 ಕ್ಕೂ ಹೆಚ್ಚು ಜನರಿದ್ದು ಅವರನ್ನು ತಳಮಟ್ಟದಿಂದ ಪಕ್ಷದ ಜತೆ ಜೋಡಿಸಿ ಸರ್ಕಾರದ ಸೌಲಭ್ಯ ಒದಗಿಸಲು ಉದ್ದೇಶ ಇರಿಸಿಕೊಳ್ಳಲಾಗಿದೆ. ಕೇಂದ್ರದ ಕೌಶಲ್ಯ ಭಾರತ ಯೋಜನೆಯಡಿ ಸುಮಾರು 450 ತರಬೇತಿ ಕಾರ್ಯಕ್ರಮಗಳಿದ್ದು ಅವುಗಳ ಬಗ್ಗೆ ಸಮುದಾಯಕ್ಕೆ ಮಾಹಿತಿ ನೀಡಿ ಮಾರುಕಟ್ಟೆ ಮತ್ತು ಬೇಡಿಕೆಗೆ ಅನುಗುಣವಾಗಿ ಅಗತ್ಯ ತರಬೇತಿ ಕೊಡಿಸಬೇಕಿದೆ ಎಂದರು.
ಚಿಂತನ-ಮಂಥನ ಕಾರ್ಯಕ್ರಮ:
ರಾಜ್ಯ ಸರ್ಕಾರ ವಿಶ್ವಕರ್ಮ, ಮಡಿವಾಳ, ಸವಿತಾ ಸಮಾಜ - ಹೀಗೆ ವಿವಿಧ ಸಮುದಾಯಗಳಿಗೆ ಪ್ರೋತ್ಸಾಹಕ ಕಾರ್ಯಕ್ರಮ ಹಮ್ಮಿಕೊಂಡಿದೆ. ಜತೆಗೆ ಹಾಸ್ಟೆಲ್‍ಗಳಿಗೆ ಭೇಟಿ ನೀಡುವುದು, ಅಲ್ಲಿ ವಿದ್ಯಾರ್ಥಿಗಳ ಸಮಸ್ಯೆ ಗಮನಿಸಿ ಸರ್ಕಾರದ ಮಟ್ಟದಲ್ಲಿ ಪರಿಹಾರ ಕಲ್ಪಿಸುವ ನೈತಿಕ ಹೊಣೆಗಾರಿಕೆ ಹೊತ್ತುಕೊಳ್ಳುವುದು, ಸಮುದಾಯದ ಜತೆ ಚಿಂತನ ಮಂಥನ ನಡೆಸಿ ಅಲ್ಲಿ ಬೆಳಕಿಗೆ ಬರುವ ಹಲವು ವಿಷಯಗಳ ಬಗ್ಗೆ ಗಮನ ಹರಿಸುವಂತಹ ಜವಾಬ್ದಾರಿಗಳನ್ನು ಒಬಿಸಿ ಮಂಡಲ ಅಧ್ಯಕ್ಷರಿಗೆ ಪಕ್ಷ ವಹಿಸಿದೆ ಎಂದರು.
ಯುಪಿಎಸ್‍ಸಿ ಪರೀಕ್ಷೆ: ಅವಕಾಶ ವಿಸ್ತರಣೆ:
ಈ ಹಿಂದೆ ಒಬಿಸಿ ಅಭ್ಯರ್ಥಿಗಳಿಗೆ ಮೂರು ಬಾರಿ ಮಾತ್ರ ಯುಪಿಎಸ್‍ಸಿ ಪರೀಕ್ಷೆ ಬರೆಯಲು ಅವಕಾಶವಿತ್ತು. ಈಗ ಅದನ್ನು ಆರು ಬಾರಿ ಬರೆಯಲು ಅವಕಾಶ ನೀಡಲಾಗಿದೆ. ಕೇಂದ್ರೀಯ ವಿದ್ಯಾಲಯ, ನವೋದಯ ಶಾಲೆಗಳು, ಸೈನಿಕ ಶಾಲೆಗಳಲ್ಲಿ ಒಬಿಸಿಗೆ ಮೀಸಲಾತಿ ಇರಲಿಲ್ಲ. ಬಿಜೆಪಿ ಸರ್ಕಾರ ಬಂದ ಬಳಿಕ ಶೇ.27 ರಷ್ಟು ಮೀಸಲಾತಿ ಜಾರಿಗೆ ಬಂದಿದ್ದು, ಹಲವರಿಗೆ ಅವಕಾಶ ಸಿಗುತ್ತಿದೆ ಎಂದು ಹೇಳಿದರು.
ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ್ ಬಾಬು, ಉಪಾಧ್ಯಕ್ಷ ಅಶೋಕ್ ಮೂರ್ತಿ, ಜಿಲ್ಲಾಧ್ಯಕ್ಷ ವೆನಿಲ್ಲಾ ಭಾಸ್ಕರ್, ಜಿಲ್ಲಾ ಬಿಜೆಪಿ ವಕ್ತಾರ ವರಸಿದ್ದಿ ವೇಣುಗೋಪಾಲ್, ಮಾಧ್ಯಮ ಪ್ರಮುಖ್ ಡಿ.ಸುಧೀರ್ ಸುದ್ದಿಗೋಷ್ಠಿಯಲ್ಲಿದ್ದರು.