

ಆಲ್ದೂರು: ರೇಣುಕಾಚಾರ್ಯರು, ಬಸವೇಶ್ವರರು ಸಮಾಜದ ಒಳಿತಿಗಾಗಿ ಶ್ರಮಿಸಿದವರು. ಧರ್ಮ ಪ್ರಚಾರ ಮಾಡಿ ಸಮಾಜದ ಜನರನ್ನು ಒಂದು ಗೂಡಿಸಿದರು, ಇವರ ಹಾದಿಯಲ್ಲಿ ನಾವು ನಡೆಯಬೇಕಿದೆ ಎಂದು ಬೇರುಗಂಡಿ ಬೃಹನ್ಮಠದ ಶ್ರೀರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಆಲ್ದೂರು ಹೋಬಳಿ ವೀರಶೈವ ಲಿಂಗಾಯತ ಸಮಾಜ ಆಯೋಜಿಸಿದ್ದ ಶ್ರೀ ರೇಣುಕಾಚಾರ್ಯ ಜಯಂತಿ, ಶ್ರೀ ಬಸವೇಶ್ವರ ಜಯಂತಿ ಪ್ರತಿಭಾ ಪುರಸ್ಕಾರ ಹಾಗೂ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಪ್ರಸ್ತುತ ನಮ್ಮ ಸಮಾಜ ಒಳಪಂಗಡಗಳ ಸುಳಿಗೆ ಸಿಲುಕಿ ನಲುಗುತ್ತಿದೆ. ನಾವೆಲ್ಲರೂ ವೈಮನಸ್ಸು, ವೈಯಕ್ತಿಕ ಪ್ರತಿಷ್ಠೆ ಮರೆತು ಒಂದಾಗುವ ಕಾಲ ಸನ್ನಿಹಿತವಾಗಿದೆ. ಸಮಾಜವನ್ನು ಬೇರುಮಟ್ಟದಿಂದ ಗಟ್ಟಿಗೊಳಿಸಿ ಮುಂದಿನ ಪೀಳಿಗೆಗೆ ಸಧೃಡ ಸಮಾಜ ಕೊಡುಗೆ ನೀಡುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಸಹಾಯಕ ಪೊಲೀಸ್ ಉಪ ನಿರೀಕ್ಷಕ ಡಾ.ಮೋಹನ್ ರಾಜಣ್ಣ ಮಾತನಾಡಿ, ರೇಣುಕಾಚಾರ್ಯರು ಕೊಲನಿಪಾಕದಲ್ಲಿ ಲಿಂಗದಲ್ಲಿ ಅವತರಿಸಿ ದೇಶಾದ್ಯಾಂತ ಸಂಚರಿಸಿ ಕಲೆ ,ಸಾಹಿತ,್ಯ ಸಂಸ್ಕೃತಿ ಪಸರಿಸಿದರು. ಬಸವಣ್ಣನವರು 12ನೇ ಶತಮಾನದಲ್ಲಿ ಜಾತೀಯತೆಯ ವಿರುದ್ದ ಧ್ವನಿ ಎತ್ತಿದರು. ಈ ಮೂಲಕ ವಿಶ್ವಗುರುವಾಗಿ ಬಸವಣ್ಣ ಪ್ರಖ್ಯಾತಿ ಪಡೆದರು ಎಂದು ಹೇಳಿದರು.
ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಂಘದ ಗೌರವ ಅಧ್ಯಕ್ಷ ಇ.ಸಿ.ಉಮೇಶ್, ಕಾಫಿಬೆಳೆಗಾರ ಕೆ.ವಿ.ದೇವಾನಂದನ್, ಕಾರ್ಯದರ್ಶಿ ವೈ.ಸಿ.ಹರೀಶ್,ಖಜಾಂಚಿ ಇ.ಆರ್.ಗಂಗಾಧರಯ್ಯ, ಉಪಾಧ್ಯಕ್ಷ ಭಗತ್, ಇ .ಸಿ ಕುಮಾರ್, ಮಂಜುನಾಥ್, ಸಂಘಟನಾ ಕಾರ್ಯದರ್ಶಿ ವಿ.ಜೆ.ರಾಜೇಶ್, ಸಂಚಾಲಕ ವಸಂತ್, ರಾಜೀವ್, ಉಮೇಶ್, ತೀರ್ಥಪ್ಪ ಮತ್ತಿತರರಿದ್ದರು.