

ನಾಪೋಕ್ಲು: ಸದಸ್ಯರ ಸಹಕಾರದಿಂದ ಸಂಘದ ಬಲವರ್ಧನೆ ಸಾಧ್ಯ ಎಂದು ಕೊಡಗು ಹವ್ಯಕ ಬ್ರಾಹ್ಮಣರ ಉತ್ತಮ ಜೀವನ ಸಹಕಾರ ಸಂಘದ ಅಧ್ಯಕ್ಷ ಪಿ.ಎನ್.ಹರಿಶಂಕರ್ ಪ್ರಸಾದ್ ಹೇಳಿದರು.
ವಿರಾಜಪೇಟೆಯ ಚಿಕ್ಕಪೇಟೆಯಲ್ಲಿರುವ ಆಂಜನೇಯ ದೇವಸ್ಥಾನದ ಸಭಾಭವನದಲ್ಲಿ ಆಯೋಜಿಸಿದ್ದ ಕೊಡಗು ಹವ್ಯಕ ಬ್ರಾಹ್ಮಣರ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
1948ರಲ್ಲಿ ಸ್ಥಾಪನೆಯಾದ ಕೊಡಗು ಹವ್ಯಕ ಬ್ರಾಹ್ಮಣರ ಉತ್ತಮ ಜೀವನ ಸಹಕಾರ ಸಂಘ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಗುತ್ತಿದೆ ಎಂದರು. ಉಪಾಧ್ಯಕ್ಷ ಎಂ.ಎಸ್.ಸುಧೀರ್ ಕುಮಾರ್ ಮಾತನಾಡಿ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಕೊಡಗು ಹಾಗೂ ಸಂಘದ ಆಶ್ರಯದಲ್ಲಿ ವಿಪ್ರ ಕ್ರಿಕೆಟ್ ಟೂರ್ನಿಯನ್ನು ವಿರಾಜಪೇಟೆಯಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ಸಂಘದ ನಿರ್ದೇಶಕರಾದ ಪಿ.ಎಸ್ ನರೇಂದ್ರನಾಥ್, ಕೆ.ಆರ್.ರಂಜಿತ್, ಪಿ.ಎ.ನಾಗರಾಜ್, ಎನ್.ಎಸ್.ಉದಯಶಂಕರ್, ಸಿ.ಎಸ್.ಸುರೇಶ್, ಕೆ.ಎಸ್.ಮಂಜುನಾಥ್ ಉಪಸ್ಥಿತರಿದ್ದರು.