ಬಿಜೆಪಿ ಬೂತ್ ಮಟ್ಟದಲ್ಲಿ ಬಲವರ್ಧನೆ

Koppa bjp
ಕೊಪ್ಪ ಬಿಜೆಪಿ ಕಚೇರಿಯಲ್ಲಿ ದಿನೇಶ್ ಹೊಸೂರು ಅವರಿಗೆ ಸತೀಶ್ ಅದ್ದಡ ಪಕ್ಷದ ಧ್ವಜ ನೀಡುವುದರ ಮೂಲಕ ಮಂಡಲ ಅಧ್ಯಕ್ಷ ಅಧಿಕಾರ ಹಸ್ತಾಂತರಿಸಿದರು. ಬಿ.ಕೆ.ಗಣೇಶ್ ರಾವ್, ರಾಮಸ್ವಾಮಿ, ಪುಣ್ಯಪಾಲ್ ಇತರರಿದ್ದರು.
Published on

ಕೊಪ್ಪ: ತಾಲೂಕಿನಾದ್ಯಂತ ಬೂತ್ ಮಟ್ಟದಲ್ಲಿ ಪಕ್ಷ ಚುರುಕುಗೊಳಿಸಿ ಮತ್ತಷ್ಟು ಬಲ ತುಂಬಲು ಶ್ರಮಿಸುತ್ತೇನೆ. ಕಾರ್ಯಕರ್ತರ ಜತೆ ಇದ್ದು ಪಕ್ಷಕ್ಕೆ ಶಕ್ತಿ ತುಂಬುವ ಪ್ರಯತ್ನ ಮಾಡಲಾಗುತ್ತದೆ ಎಂದು ಬಿಜೆಪಿ ನೂತನ ಅಧ್ಯಕ್ಷ ದಿನೇಶ್ ಹೊಸೂರು ಹೇಳಿದರು.

ಗುರುವಾರ ಪಕ್ಷದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಂಡಲ ಅಧ್ಯಕ್ಷ ಜವಾಬ್ದಾರಿ ಸ್ವೀಕರಿಸಿ ಮಾತನಾಡಿ, ಬಿಜೆಪಿ ಕಾರ್ಯಕರ್ತರ ಪಕ್ಷ. ನನ್ನಂಥ ಸಾಮಾನ್ಯ ಕಾರ್ಯಕರ್ತನಿಗೆ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿ ಹಿರಿಯರು ನೀಡಿದ್ದಾರೆ. ಎಲ್ಲರ ವಿಶ್ವಾಸ, ಸಹಕಾರ ಪಡೆದು ಉತ್ತಮ ರೀತಿಯಲ್ಲಿ ಪಕ್ಷ ಸಂಘಟಿಸಲಾಗುತ್ತದೆ ಎಂದರು.
ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪ ಮತದ ಅಂತರದಿಂದ ಸೋತಿದೆ. ಕೊಪ್ಪ ತಾಲೂಕಿನಲ್ಲಿ ಕಾಂಗ್ರೆಸಿಗಿಂತ ಬಿಜೆಪಿ ಹೆಚ್ಚಿನ ಮತ ಪಡೆದಿದೆ. ಮುಂದಿನ ದಿನದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಸಂಘಟನೆ ಮಾಡಲಾಗುತ್ತದೆ. ಮತ್ತೆ ಕ್ಷೇತ್ರದಲ್ಲಿ ಕಮಲ ಅರಳಿಸುವಲ್ಲಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಸತೀಶ್ ಅದ್ದಡ ಮಾತನಾಡಿ, ನಾಲ್ಕೂವರೆ ವರ್ಷಗಳು ಪಕ್ಷದ ಅಧ್ಯಕ್ಷನಾಗಿ ಸೇವೆ ಸಲ್ಲಿಸಲು ಉತ್ತಮ ಅವಕಾಶ ದೊರೆತಿತ್ತು. ನನ್ನ ಅವಧಿಯಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಬಾರದ ರೀತಿಯಲ್ಲಿ ಕೆಲಸ ಮಾಡಿದ್ದೇನೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ 4 ಸಾವಿರ ಮತಗಳ ಮುನ್ನಡೆ ನೀಡಿದ್ದೇವೆ. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಗೆಲುವು ಕಂಡಿದ್ದೇವೆ. ಇದಕ್ಕೆ ಪದಾಧಿಕಾರಿಗಳು, ಕಾರ್ಯಕರ್ತರು ಕಾರಣ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್.ರಾಮಸ್ವಾಮಿ ಮಾತನಾಡಿ, ನೂತನ ಅಧ್ಯಕ್ಷ ಎಲ್ಲರ ವಿಶ್ವಾಸ ಪಡೆದು ಪಕ್ಷ ಸಂಘಟಿಸಬೇಕು. ಎಲ್ಲ ಮೋರ್ಚಾಗಳ ಚಟುವಟಿಕೆ ಕಚೇರಿಯಲ್ಲಿ ನಡೆಯಬೇಕು ಎಂದರು.
ಬಿಜೆಪಿ ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಕೆ.ಗಣೇಶ್ ರಾವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಣ್ಯಪಾಲ್, ಜಿಲ್ಲಾ ಉಪಾಧ್ಯಕ್ಷ ಜಿ.ಎಸ್.ಮಹಾಬಲ್ ರಾವ್ ಮಾತನಾಡಿದರು. ಬಿಜೆಪಿ ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿ ಶರತ್, ಮಹಿಳಾ ಮೋರ್ಚಾ ಕಾರ್ಯದರ್ಶಿ ಶ್ರುತಿ ರೋಹಿತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net