ರೋಗಿ-ವೈದ್ಯರ ಸಂಬಂಧ ಗಟ್ಟಿಗೊಳ್ಳಲಿ

29 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ರೋಗಿಗಳು ವೈದ್ಯರ ಮೇಲಿಟ್ಟಿರುವ ನಂಬಿಕೆಯಂತೆ ವೈದ್ಯರು ಅದಕ್ಕೆ ಪೂರಕವಾಗಿ ಸ್ಪಂದಿಸಬೇಕು. ರೋಗಿಗಳ ಕುರಿತು ಕಾಳಜಿ, ಸಹಾನುಭೂತಿ ವ್ಯಕ್ತಪಡಿಸುವುದರ ಜತೆಗೆ ರೋಗಿ ಮತ್ತು ವೈದ್ಯರ ನಡುವಿನ ಸಂಬಂಧ ಗಟ್ಟಿಗೊಳ್ಳಬೇಕಿದೆ. ವೈದ್ಯರ ನಿರ್ಲಕ್ಷತೆಯೇ ರೋಗಿ ಸಾಯಲು ಕಾರಣ ಎಂಬ ಭಾವ ಬರಬಾರದು ಎಂದು ಗದಗ ಸಂಕನೂರ ಆಸ್ಪತ್ರೆ ವೈದ್ಯೆ ಡಾ. ಶ್ವೇತಾ ಸಂಕನೂರ ಹೇಳಿದರು.
ನಗರದ ಕಲಾ ಸ್ಪಂದನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ನಗರದ ಆಲೂರು ವೆಂಕಟರಾವ್ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ 2023ನೇ ಸಾಲಿನ ವೈದ್ಯಶ್ರೀ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಕರ್ನಾಟಕ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹೆತ್ತ ತಂದೆ ತಾಯಿ ನಂಬದ ಮಕ್ಕಳಿದ್ದಾರೆ. ಆದರೆ ವೈದ್ಯರನ್ನು ಮತ್ತು ಅವರು ಹೇಳಿದ ಮಾತುಗಳನ್ನು ಎಲ್ಲರೂ ನಂಬುತ್ತಾರೆ. ಅಂತಹ ನಂಬಿಕೆ ಕ್ಷೇತ್ರ ಅದು ವೈದ್ಯಕೀಯ ಕ್ಷೇತ್ರ. ಆದರೆ ಅದನ್ನು ಉಳಿಸಿಕೊಳ್ಳುವ ಹೊಣೆ ವೈದ್ಯರದ್ದಾಗಿದೆ. ಅಂತಹ ವೈದ್ಯರಿಗೆ ಕಲಾ ಸ್ಪಂದನದ ಸರ್ವರೂ ಗೌರವದಿಂದ ಕಾಣುತ್ತಿರುವುದು ಶ್ಲಾಘನೀಯ ಎಂದರು.
ಕಲಾ ಸ್ಪದನ ಅಧ್ಯಕ್ಷ ಡಾ.ವಿ.ಎಸ್.ವಿ.ಪ್ರಸಾದ ಅಧ್ಯಕ್ಷತೆ ವಹಿಸಿದ್ದರು. ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅತಿಥಿಗಳಾಗಿ ಮೋಹನ ಸಿದ್ಧಾಂತಿ, ಡಾ. ಲಿಂಗರಾಜ ಅಂಗಡಿ, ಸವಿತಾ ಅಮರಶೆಟ್ಟಿ, ಡಾ.ಕವನ ದೇಶಪಾಂಡೆ, ಕೃಷ್ಣಾಜಿ ಚವ್ಹಾಣ, ಎಂ. ನಾರಾಯಣರೆಡ್ಡಿ, ಎಂ.ಎಸ್. ಫರಾಸ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಆಗಮಿಸಿದ್ದರು.
ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಡಾ. ಸತ್ಯನಾರಾಯಣ ಮಾಸ್ತಮ್ಮನವರ ಆಯ್ಕೆ ಕುರಿತು ಮಾತನಾಡಿದರು. ವಿವಿಧ ಕ್ಷೇತ್ರಗಳ ಸಾಧಕರಾದ ನಾಗೇಶ ಅಣ್ಣಿಗೇರಿ, ವಿಜಯೇಂದ್ರ ಪಾಟೀಲ, ಪಂ. ವಾದಿರಾಜ ನಿಂಬರಗಿ, ಡಾ. ಪ್ರಕಾಶ ಮಲ್ಲಿಗವಾಡ, ಡಾ. ಕಿರಣ ಕುಲಕರ್ಣಿ, ಡಾ. ಪಲ್ಲವಿ ದೇಶಪಾಂಡೆ, ಸುನಿಲ ಬಾಗೇವಾಡಿ, ಟಿ.ಸಿ ಪಾಟೀಲ, ಡಾ. ಮೋಹನ ರಂಗಣ್ಣನವರ, ಎಸ್.ಪಿ. ಬಗಲಿ, ವಿಜಯ ತೋಟಗೇರ, ಬಸವರಾಜ ಬಂಡಿವಡ್ಡರ, ಡಾ. ಬಿ.ಆರ್. ರಾಠೋಡ, ಅರುಣ ಶೀಲವಂತ, ವಿಜಯಕುಮಾರ ಹಳ್ಳಿಕೇರಿ, ಡಾ. ಅನಿರುದ್ಧ ಕುಲಕರ್ಣಿ, ಡಾ. ಅರ್ಚನಾ ಮಜುಮದಾರ, ಎಚ್.ಡಿ. ದುರಣ್ಣವರ, ವಿಠ್ಠಲ ಜಾಧವ ಅವರಿಗೆ ಸನ್ಮಾನಿಸಲಾಯಿತು.
ಕಲಾ ಸ್ಪಂದನದ ಉಪಾಧ್ಯಕ್ಷ ಮಾರ್ತಾಂಡಪ್ಪ ಕತ್ತಿ ಸ್ವಾಗತಿಸಿದರು. ಮೇಘಾ ಪಾಟೀಲ ನಿರೂಪಿಸಿದರು. ಮಂಜುನಾಥ ಎಂ.ಕೆ. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net