

ಚಿಕ್ಕಮಗಳೂರು: ರಾಜ್ಯದಲ್ಲಿ ಭ್ರಷ್ಟ ಕಾಂಗ್ರೆಸ್ ಸರ್ಕಾರ ತೊಲಗಿಸಿ ಸದೃಢ ಬಿಜೆಪಿ ಸರ್ಕಾರ ರಚಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಪ್ರತಿ ಬೂತ್‌ನಲ್ಲಿ ಸದಸ್ಯತ್ವ ಅಭಿಯಾನ ಕೈಗೊಂಡು ರಾಜ್ಯಾಧ್ಯಕ್ಷರ ಕೈ ಬಲಪಡಿಸಬೇಕು ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ತಿಳಿಸಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಬಿಜೆಪಿ ಸದಸ್ಯತ್ವ ಅಭಿಯಾನ-೨೦೨೪ರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಎಂದಿಗೂ ನಿಂತ ನೀರಾಗದೇ ನಿರಂತರ ಚಟುವಟಿಕೆ ಕೂಡಿರಬೇಕು ಎಂದು ಕರೆ ನೀಡಿದರು.
ಕಾರ್ಯಕರ್ತರು ಪರಸ್ಪರ ಭಾವನಾತ್ಮಕ ಸಂಬAಧ ಬೆಳೆಸಿಕೊಳ್ಳಬೇಕು. ಆಗಮಾತ್ರ ಪಕ್ಷ ಪ್ರತಿ ಹಂತದಲ್ಲೂ ಬೆಳವಣಿಗೆ ಹೊಂದಲು ಸಾಧ್ಯ. ಬಿಜೆಪಿ ಯಾರೊಬ್ಬರ ಸ್ವತ್ತಲ್ಲ. ಪ್ರತಿಯೊಬ್ಬ ಕಾರ್ಯಕರ್ತರ ಸ್ವತ್ತು. ಹೀಗಾಗಿ ಧೃತಿಗೆಡದೇ ಕಾರ್ಯಕರ್ತರು ಗ್ರಾಮದ ಮನೆ ಮನೆಗೆ ಭೇಟಿ ನೀಡಿ ಅತಿಹೆಚ್ಚು ಸಂಖ್ಯೆಯಲ್ಲಿ ಸದಸ್ಯರನ್ನು ನೋಂದಣಿ ಮಾಡಬೇಕು ಎಂದು ಹೇಳಿದರು.
ಈಗಾಗಲೇ ಪಕ್ಷದ ರಾಜ್ಯಾಧ್ಯಕ್ಷರು ಸಮಯ ವ್ಯರ್ಥಗೊಳಿಸದೇ ರಾಜ್ಯಾದ್ಯಂತ ಹೋರಾಟ ರೂಪಿಸುತ್ತಿದ್ದಾರೆ. ಸದ್ಯದಲ್ಲೇ ಮೂಡ ಹಗರಣದಲ್ಲಿ ಸಿಲುಕಿಕೊಂಡಿರುವ ಮುಖ್ಯಮಂತ್ರಿಗಳನ್ನು ಅಧಿಕಾರದಿಂದ ಕೆಳಗಿಳಿಸುವುದು ನಿಶ್ಚಿತ. ಅದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಸ್ಷಷ್ಟಪಡಿಸಿದರು.
ಆ ನಿಟ್ಟಿನಲ್ಲಿ ಪಕ್ಷದ ಸೈದ್ದಾಂತಿಕ ನಿಲುವಿನಡಿ ಕಾರ್ಯಕರ್ತರು ನಗರ ಸೇರಿದಂತೆ ಗ್ರಾಮಮಟ್ಟದಲ್ಲಿ ಅಭಿಯಾನಕ್ಕಾಗಿ ನೇಮಿಸಿರುವ ಸಂಚಾಲಕರುಗಳ ಸೂಚನೆ ಮೇರೆಗೆ ಪ್ರತಿ ಮನೆಗಳಿಗೆ ಭೇಟಿಕೊಟ್ಟು ಪಕ್ಷ ಸಂಘಟನೆಯಲ್ಲಿ ತೊಡಗಬೇಕು. ಬಿಜೆಪಿ ಮತ್ತೊಮ್ಮೆ ರಾಜ್ಯದಲ್ಲಿ ಪ್ರಜ್ವಲಿಸುವಂತೆ ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ ಹೆಚ್ಚಿನ ಕೆಲಸ ನಿರ್ವಹಿಸುವ ಅತಿಥಿ ಶಿಕ್ಷಕರ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಅತಿಥಿ ಶಿಕ್ಷಕರಿಗೆ ಮೆಡಿಕಲ್ ಸೌಲಭ್ಯ, ಖಾಯಂಗೊಳಿಸುವಿಕೆ ಸೇರಿದಂತೆ ಇನ್ನಿತರೆ ಎಲ್ಲ ಸೌಲಭ್ಯಗಳಿಂದ ವಂಚಿತಗೊಳಿಸಿದೆ ಎಂದು ದೂರಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ ಮಾತನಾಡಿ, ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯಕರ್ತರ ಶ್ರಮ ಬಹಳಷ್ಟಿದೆ. ಹೀಗಾಗಿ ಅಭಿಯಾನ ಸದಸ್ಯತ್ವದಲ್ಲಿ ಜಿಲ್ಲೆಯ ಪ್ರತಿ ತಾಲೂಕು, ಹೋಬಳಿ ಹಾಗೂ ಗ್ರಾಮದಲ್ಲಿ ಪಕ್ಷ ಸಂಘಟಿಸಿ ಸದಸ್ಯತ್ವ ನೊಂದಣಿಗೊಳಿಸಬೇಕು ಎಂದು ಸೂಚನೆ ನೀಡಿದರು.
ಇದೇ ವೇಳೆ ಅಭಿಯಾನದ ಸಮಿತಿ ಸಂಚಾಲಕರಾಗಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾ ಡಾ.ನರೇಂದ್ರ, ರವೀಂದ್ರ ಬೆಳವಾಡಿ, ಪುಣ್ಯಪಾಲ್, ಯುವಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್, ಸದಸ್ಯರಾಗಿ ವೀಣಾಶೆಟ್ಟಿ, ಸವಿತಾ ರಮೇಶ್, ರತನ್ ಅವರನ್ನು ನೇಮಿಸಲಾಯಿತು.